ಬೆಂಗಳೂರು: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ‘ಅಭಯ ಹಸ್ತ’ ಕಾರ್ಯಕ್ರಮದಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಹೊಸದಾಗಿ ಆಯ್ಕೆಯಾದ 878 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿದರು.
ಈ ಕುರಿತು ಸಚಿವ ದಿನೇಶ್ ಗುಂಡೂರಾವ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನೇಮಕಾತಿ ಪತ್ರಗಳನ್ನು ವಿತರಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಮಾತನಾಡಿ, ನೇಮಕಾತಿ ಪಡೆದವರು ಕೇವಲ ಉದ್ಯೋಗದ ಮನೋಭಾವದಿಂದಲ್ಲ, ಜನರ ಆರೋಗ್ಯ ರಕ್ಷಣೆಯ ಧ್ಯೇಯದಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು. ಜಾತಿ–ಧರ್ಮದ ಭೇದವಿಲ್ಲದೆ ಕರುಣೆ ಮತ್ತು ಸಮಾನತೆಯಿಂದ ಸೇವೆ ಸಲ್ಲಿಸಬೇಕು ಎಂದರು.. ಕೌನ್ಸಿಲಿಂಗ್ ಮೂಲಕ ಪಾರದರ್ಶಕ ವರ್ಗಾವಣೆ ಜಾರಿಯಲ್ಲಿದ್ದು, ಲಂಚ–ಏಜೆಂಟ್ ಸಂಸ್ಕೃತಿಯಿಂದ ದೂರ ಇರಬೇಕೆಂದು ಎಚ್ಚರಿಸಿ ನೇಮಕಾತಿ ಪಡೆದುಕೊಂಡ ಎಲ್ಲರಿಗೆ ಶುಭಹಾರೈಸಿದರು ಎಂದು ಹೇಳಿದ್ದಾರೆ.
ನಮ್ಮ ಆರೋಗ್ಯ ಇಲಾಖೆಯು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ ಜೀವ ತುಂಬಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಿ, ಅಲ್ಲಿನ 320 ಮಂದಿ ಸೇರಿದಂತೆ ಒಟ್ಟು 878 ಮಂದಿಗೆ ಇಂದು ಹೊಸ ಭವಿಷ್ಯ ರೂಪಿಸಲಾಗಿದೆ. ಕೌನ್ಸಿಲಿಂಗ್ ಮೂಲಕ 5700ಕ್ಕೂ ಹೆಚ್ಚು ವೈದ್ಯರು ಮತ್ತು ನರ್ಸ್ಗಳ ಪಾರದರ್ಶಕ ವರ್ಗಾವಣೆ ಮಾಡಿ ಮಾದರಿ ನಿರ್ಮಿಸಲಾಗಿದೆ.
‘ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ’ ಯೋಜನೆಯಡಿ 13 ಸಾವಿರಕ್ಕೂ ಹೆಚ್ಚು ಜನರಿಗೆ ಜೀವದಾನ ಸಿಕ್ಕಿದ್ದು, 16 ಜಿಲ್ಲೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಕೇಂದ್ರಗಳನ್ನು ಆರಂಭಿಸಿ ಬಡವರಿಗೆ ನೆರವಾಗಿದೆ. ‘ಶುಚಿ’ ಮತ್ತು ‘ಮೈತ್ರಿ’ ಯೋಜನೆಗಳಡಿ 19 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಪ್ಯಾಡ್ ಮತ್ತು ಮುಟ್ಟಿನ ಕಪ್ ವಿತರಿಸಲಾಗಿದೆ. ತಾಯಿ ಮರಣದರ ಇಳಿಕೆ, ಭ್ರೂಣ ಹತ್ಯೆ ವಿರುದ್ಧ ಕಾನೂನು ಬಿಗಿಗೊಳಿಸುವಿಕೆ ಹಾಗೂ ಮಾಹಿತಿ ನೀಡಿದವರಿಗೆ ₹1 ಲಕ್ಷ ಬಹುಮಾನ ಯೋಜನೆ ಜಾರಿಯಲ್ಲಿದೆ.
ಸೌರಸ್ವಾಸ್ಥ್ಯ’ ಯೋಜನೆಯಡಿ 5,000 ಆಸ್ಪತ್ರೆಗಳಿಗೆ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಈಗಾಗಲೇ 3,600 ಆಸ್ಪತ್ರೆಗಳಲ್ಲಿ ಜಾರಿ ಮಾಡಿ ಇಂಧನ ಉಳಿತಾಯ ಸಾಧಿಸಲಾಗಿದೆ. ಸಾಧನೆಯ ಈ 1000 ದಿನಗಳು ಕೇವಲ ಆರಂಭವಷ್ಟೇ. ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಅತ್ಯಾಧುನಿಕ ಚಿಕಿತ್ಸೆ ಸಿಗುವವರೆಗೆ ನಾವು ವಿಶ್ರಮಿಸುವುದಿಲ್ಲ. ನಮ್ಮ ಆರೋಗ್ಯ ಇಲಾಖೆ ಒಂದು ಕುಟುಂಬವಾಗಿ ಕಾರ್ಯನಿರ್ವಹಿಸುತ್ತಿದ್ದು ಗುಣಮಟ್ಟದ ಆರೋಗ್ಯ ಸೇವೆ ಮುಂದುವರಿಯಲಿದ್ದು ನೇಮಕಾತಿ ಆದೇಶ ಪಡೆದ ಎಲ್ಲ ಅಭ್ಯರ್ಥಿಗಳಿಗೆ ಶುಭಾಶಯ ತಿಳಿಸಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳಾದ ಹರ್ಷ ಗುಪ್ತ, ಆಯುಕ್ತರಾದ ಗುರುದತ್ ಹೆಗಡೆ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

