ಎಚ್.ಡಿ.ರೇವಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಜೆಡಿಎಸ್ ನಾಯಕ, ಮಾಜಿ ಸಚಿವ ಎಚ್.ಡಿ.ರೇವಣ್ಣ 2028ರ ಚುನಾವಣೆಗೆ ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ ಎಂಬುದು ಸದ್ಯದ ಸುದ್ದಿ. ಹೊಳೆನರಸೀಪುರ ಕ್ಷೇತ್ರದ ಹಾಲಿ ಶಾಸಕರ ಕ್ಷೇತ್ರ ಬದಲಾವಣೆ ಸುದ್ದಿ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಮುಂದಿನ ಚುನಾವಣೆಗೆ ಎಚ್.ಡಿ.ರೇವಣ್ಣ ಅರಸೀಕೆರೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದೆ. ಈ ಸುದ್ದಿ ಹಾಸನ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಕ್ಷೇತ್ರದ ಹಾಲಿ ಶಾಸಕ, ಕಾಂಗ್ರೆಸ್ ನಾಯಕ ಕೆ.ಎಂ.ಶಿವಲಿಂಗೇಗೌಡ ಪಂಥಾಹ್ವಾನ ಕೊಟ್ಟಿದ್ದಾರೆ.
“ಮುಂದಿನ ಚುನಾವಣೆಯಲ್ಲಿ ಎಲ್ಲಿಂದ ಯಾರೇ ಬಂದು ಸ್ಪರ್ಧಿಸಿದ್ರೂ ಎದುರಿಸಲು ಸಿದ್ಧ” ಎಂದು ಕೆ.ಎಂ.ಶಿವಲಿಂಗೇಗೌಡ ಹೇಳುವ ಮೂಲಕ ಎಚ್.ಡಿ.ರೇವಣ್ಣಗೆ ತಿರುಗೇಟು ನೀಡಿದ್ದಾರೆ. ಕೆ.ಎಂ.ಶಿವಲಿಂಗೇಗೌಡ ಮೊದಲು ಜೆಡಿಎಸ್ ಪಕ್ಷದಲ್ಲಿಯೇ ಇದ್ದರು. 2023ರ ಮಾರ್ಚ್‌ನಲ್ಲಿಅವರು ಕಾಂಗ್ರೆಸ್ ಸೇರಿ 2023ರ ಚುನಾವಣೆ ಗೆದ್ದು ಬಂದಿದ್ದಾರೆ.
ಅರಸೀಕೆರೆಯ ಚುನಾವಣಾ ಫಲಿತಾಂಶ
- 2008. ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ 74,025 ಮತ ಪಡೆದು ಗೆಲುವು. ಕಾಂಗ್ರೆಸ್‌ನ ಜಿ.ವಿ.ಸಿದ್ದಪ್ಪ ಮತ್ತು ಬಿಜೆಪಿಯ ಬಿ.ಎನ್.ರವಿ ಸೋಲು.
- 2013. ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ 76,579 ಮತ ಪಡೆದು ಗೆಲುವು. ಕಾಂಗ್ರೆಸ್‌ನ ಬಿ.ಶಿವರಾಮು ಮತ್ತು ಕೆಜೆಪಿಯ ಡಾ.ಲೋಕೇಶ್ ಡಿ.ಜಿ. ಸೋಲು.
- 2018. ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ 93,986 ಮತ ಪಡೆದು ಗೆಲುವು. ಕಾಂಗ್ರೆಸ್‌ನ ಜಿ.ಬಿ.ಶಶಿಧರ ಮತ್ತು ಬಿಜೆಪಿಯ ಜಿ.ಮರಿಸ್ವಾಮಿ ಸೋಲು.
- 2023ರಲ್ಲಿ ಕಾಂಗ್ರೆಸ್‌ನ ಕೆ.ಎಂ.ಶಿವಲಿಂಗೇಗೌಡ 98,375 ಮತಗಳನ್ನು ಪಡೆದು ಗೆಲುವು. ಜೆಡಿಎಸ್‌ನ ಎನ್.ಆರ್.ಸಂತೋಷ್ ಮತ್ತು ಬಿಜೆಪಿಯ ಜಿ.ವಿ.ಟಿ.ಬಸವರಾಜ ಸೋಲು.
ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಇರುವ ಬೆಂಬಲವನ್ನು ತಿಳಿದು ಎಚ್.ಡಿ.ರೇವಣ್ಣ ಅಲ್ಲಿಂದ ಸ್ಪರ್ಧೆ ಮಾಡಲು ಬಯಸಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ ರೇವಣ್ಣ ಅಧಿಕೃತವಾಗಿ ಈಕುರಿತು ಪ್ರತಿಕ್ರಿಯೆ ನೀಡಿಲ್ಲ. ಕ್ಷೇತ್ರದ ಜೆಡಿಎಸ್ ಮುಖಂಡರು ಈ ಕುರಿತು ರೇವಣ್ಣ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಪಂಥಾಹ್ವಾನ ಕೊಟ್ಟ ಕೆ.ಎಂ.ಶಿವಲಿಂಗೇಗೌಡ: ಸೋಮವಾರ ಮಾತನಾಡಿದ ಕೆ.ಎಂ.ಶಿವಲಿಂಗೇಗೌಡ, “ನಾಲ್ಕು ಬಾರಿ ಶಾಸಕ ಆಗಿದ್ದೀನಿ. ನಮ್ಮ ಅಪ್ಪ ಹೆಬ್ಬೆಟ್ಟು, ನಮ್ಮ ಅಪ್ಪ ನೀಟಾಗಿ ಹೊಲದಲ್ಲಿ ಸಾಲು ಹೊಡೆಯುತ್ತಿದ್ದರು. ಅಂತಹವನ ಹೊಟ್ಟೆಯಲ್ಲಿ ಹುಟ್ಟಿದವನು ನಾನು. ಇತಿಹಾಸ ನನಗೂ ಗೊತ್ತಿದೆ” ಎಂದರು.
“ಅಲ್ಲಿಂದ ಬೆಳೆದು ಬಂದವನು, 50 ಜನ ಹಿಂದೆ ಕರೆದುಕೊಂಡು ಅರಸೀಕೆರೆಗೆ ಬಂದಿದ್ದೀರಾ, ಅರಸೀಕೆರೆಯಲ್ಲಿ ಇದು ನಡೆಯೋದಿಲ್ಲ. ಅರಸೀಕೆರೆ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಪಟ್ಟಿ, ಪುಸ್ತಕ ಬಿಡುಗಡೆ ಮಾಡುತ್ತೇನೆ” ಎಂದು ಹೇಳಿದರು.
“ಅರಸೀಕೆರೆಗೆ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸಿಕೊಂಡು ಬಂದರೆ ಮಾರನೇ ದಿನ ಮೊಸಳೆಹೊಸಳ್ಳಿಗೆ ತೆಗೆದುಕೊಂಡು ಹೋಗಿದ್ದೀರಿ. ಅರಸೀಕೆರೆಗೆ ಏನು ಮಾಡಿದ್ದೀರಿ?. ಇಲ್ಲಿ ನಿಮ್ಮದು ನೆಲೆ ಎಲ್ಲಿದೆ? ಬನ್ನಿ ನಿಂತುಕೊಳ್ಳಿ, ಅರಸೀಕೆರೆ ಜನ ತೋರಿಸುತ್ತಾರೆ. ಸುಮ್ಮಸುಮ್ಮನೆ ಭಾಷಣ ಮಾಡಬೇಡಿ” ಎಂದು ತಿಳಿಸಿದರು.
“ನಾನು ಕಾಂಗ್ರೆಸ್‍ಗೆ ಕದ್ದುಮುಚ್ಚಿ ಹೋಗಿಲ್ಲ. ನೀವು ಬರೀ ನಿಮ್ಮ ಮನೆ, ನಿಮ್ಮ ಮನೆತನ, ನೀವೇ ರಾಜಕೀಯ ಮಾಡಿಕೊಂಡು ಹೋದಿರಿ. ಹಾಸನ ಜಿಲ್ಲೆಯಲ್ಲಿ ಬೇರೆ ಯಾರು ಬೆಳೆಯುವುದು ಬೇಡವೇ?. ನಾನು ಬಂದು ಅರಸೀಕೆರೆ ಶಾಸಕನಾದಾಗ ಜೆಡಿಎಸ್ ಪಕ್ಷಕ್ಕೆ 85 ಸಾವಿರ ಮತಗಳನ್ನು ಹಾಕಿಸಿದ್ದೇನೆ. ನೀವು ಅರಸೀಕರೆಗೆ ಏನು ಮಾಡಿದ್ದೀರಿ? ಎಂಬುದು ಜನರಿಗೆ ಗೊತ್ತಿದೆ” ಎಂದು ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಅರಸೀಕೆರೆಯಲ್ಲಿ ಜೆಡಿಎಸ್‌ನ ಎನ್.ಆರ್.ಸಂತೋಷ್ ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಈಗ ರೇವಣ್ಣ ಕ್ಷೇತ್ರಕ್ಕೆ ಬಂದರೆ ಜೆಡಿಎಸ್‌ನ ಎನ್.ಆರ್.ಸಂತೋಷ್ ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ?, ಬಿಜೆಪಿಯ ನಾಯಕರು ರೇವಣ್ಣ ಕ್ಷೇತ್ರ ಬದಲಾವಣೆಗೆ ಒಪ್ಪಿಗೆ ನೀಡಲಿದ್ದಾರೆಯೇ? ಎಂಬುದು ಸದ್ಯದ ಪ್ರಶ್ನೆಯಾಗಿದೆ.

