ಮುಂಬೈ: ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶ ಇಡೀ ದೇಶದ ಗಮನ ಸೆಳೆದಿದೆ. 15 ವರ್ಷಗಳ ಮಮತಾ ಬ್ಯಾನರ್ಜಿ ಅವರ ಆಡಳಿತಕ್ಕೆ ಅಂತ್ಯ ಹಾಡಿರುವ ಬಿಜೆಪಿ, ಮೊದಲ ಬಾರಿಗೆ ಬಂಗಾಳದ ಗದ್ದುಗೆ ಏರಲು ಸಜ್ಜಾಗಿದೆ. ಈ ಐತಿಹಾಸಿಕ ಜಯವನ್ನು ಉದ್ಯಮಿ ಹರ್ಷ್ ಗೋಯೆಂಕಾ ಅವರು ವಿಶಿಷ್ಟವಾಗಿ ಆಚರಿಸಿದ್ದಾರೆ.
ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿರುವ ಗೋಯೆಂಕಾ, ಮನೆಯಲ್ಲಿ ಕುಳಿತು ಟ್ಯಾಬ್ಲೆಟ್ ನೋಡುತ್ತಾ ಬಂಗಾಳದ ಫೇಮಸ್ ಸ್ನ್ಯಾಕ್ ‘ಝಲ್ ಮುರಿ’ (ಖಾರ ಮಂಡಕ್ಕಿ ಮಾದರಿಯ ತಿಂಡಿ) ಸವಿಯುತ್ತಿದ್ದಾರೆ. “ಬಂಗಾಳ ಚುನಾವಣೆಯ ನಂತರ: ಝಲ್ ಮುರಿ ಸವಿಯುತ್ತಿದ್ದೇನೆ” ಎಂದು ಅವರು ಶೀರ್ಷಿಕೆ ನೀಡಿದ್ದಾರೆ. ನೇರವಾಗಿ ಯಾವುದೇ ರಾಜಕೀಯ ಹೇಳಿಕೆ ನೀಡದಿದ್ದರೂ, ಅವರ ಈ ಪೋಸ್ಟ್ ಬಂಗಾಳದ ರಾಜಕೀಯ ಬದಲಾವಣೆಯ ಸಂಕೇತವಾಗಿ ನೆಟ್ಟಿಗರಿಗೆ ಕಂಡಿದೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳದ ಝಾರ್‌ಗ್ರಾಮ್‌ನಲ್ಲಿ ಪ್ರಚಾರ ನಡೆಸುವಾಗ ರಸ್ತೆ ಬದಿಯ ಅಂಗಡಿಯೊಂದರಲ್ಲಿ ಝಲ್ ಮುರಿ ಖರೀದಿಸಿ ಸವಿದಿದ್ದರು. ಈಗ ಗೋಯೆಂಕಾ ಅವರ ಪೋಸ್ಟ್ ಕೂಡ ಅದೇ ನೆನಪನ್ನು ಮರುಕಳಿಸುವಂತೆ ಮಾಡಿದೆ.
ನೆಟ್ಟಿಗರ ಪ್ರತಿಕ್ರಿಯೆ: ಈ ಪೋಸ್ಟ್ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. “ಝಲ್ ಮುರಿ ಈಗ ನ್ಯಾಷನಲ್ ಸ್ನ್ಯಾಕ್ ಆಗಿದೆ” ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು “ಬಂಗಾಳಕ್ಕೆ ಹೊಸ ಆರಂಭ ಸಿಗಲಿ ಎಂಬ ಆಶಯ ನಮ್ಮದು” ಎಂದು ಬರೆದುಕೊಂಡಿದ್ದಾರೆ. ಬಂಗಾಳದ ಸಂಸ್ಕೃತಿಯ ಭಾಗವಾಗಿರುವ ಈ ತಿಂಡಿ ಈಗ ರಾಜಕೀಯ ಗೆಲುವಿನ ಸಂಭ್ರಮದ ಭಾಗವಾಗಿರುವುದು ವಿಶೇಷ.
ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಹಿಂಸಾಚಾರ ಮತ್ತು ಇವಿಎಂ ತಿರುಚಿದ ಆರೋಪಗಳ ನಡುವೆಯೂ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ.

