ಮಾನವೀಯತೆ ಇನ್ನು ಸತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾದ ಎರಡು ಘಟನೆಗಳು ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಭಾರೀ ಸದ್ದು ಮಾಡುತ್ತಿವೆ. ವಾರಣಾಸಿಯ ಐಷಾರಾಮಿ ತಾಜ್ ಗಂಗಾ ಹೋಟೆಲ್ ಮುಂಭಾಗ ನಡೆದ ಘಟನೆಯೊಂದು ನೆಟ್ಟಿಗರ ಕಣ್ಣಾಲಿಗಳನ್ನು ತೇವಗೊಳಿಸಿದೆ.
ಹಠ ಹಿಡಿದು ಹೋಟೆಲ್ ಒಳಗೆ ಕರೆದೊಯ್ದ ಯುವಕ ಸಮಾಜ ಸೇವಕ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿರುವ ಯಶ್ ಮಾನೆ ಎಂಬುವವರು ಬೀದಿಯ ಅನಾಥ ಮಕ್ಕಳನ್ನು ಐಷಾರಾಮಿ ಹೋಟೆಲ್‌ನಲ್ಲಿ ಊಟ ಮಾಡಿಸಬೇಕೆಂದು ನಿರ್ಧರಿಸಿದ್ದರು. ಆದರೆ ಆರಂಭದಲ್ಲಿ ಹೋಟೆಲ್‌ನ ಭದ್ರತಾ ಸಿಬ್ಬಂದಿ ಮಕ್ಕಳನ್ನು ಒಳಗೆ ಬಿಡಲು ನಿರಾಕರಿಸಿದರು. ಸುಮಾರು 30 ನಿಮಿಷಗಳ ಕಾಲ ಸಿಬ್ಬಂದಿಯೊಂದಿಗೆ ವಾದಕ್ಕಿಳಿದ ಯಶ್, “ಹರ್ ಕಿಸಿಕೊ ತಾಜ್ ಮೇ ಖಾನಾ ಖಿಲಾನಾ ಹೈ” (ಎಲ್ಲರಿಗೂ ತಾಜ್ ಹೋಟೆಲ್‌ನಲ್ಲಿ ಊಟ ಮಾಡಿಸಬೇಕು) ಎಂಬ ಹಠದೊಂದಿಗೆ ಹೋರಾಡಿದರು. ಕೊನೆಗೂ ಯಶ್ ಅವರ ಪಟ್ಟುಬಿಡದ ಪ್ರಯತ್ನಕ್ಕೆ ಮಣಿದ ಸಿಬ್ಬಂದಿ ಮಕ್ಕಳನ್ನು ಒಳಗೆ ಬಿಟ್ಟರು.
ಅನಾಥ ಮಕ್ಕಳು ತಾವೂ ಕನಸಿನಲ್ಲೂ ಯೋಚಿಸದ ಅದ್ದೂರಿ ಹೋಟೆಲ್‌ನಲ್ಲಿ ಕುಳಿತು, ರುಚಿಕರವಾದ ಊಟ ಸವಿಯುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಕೆಲವೊಮ್ಮೆ ಸಣ್ಣ ಹೋರಾಟ ಕೂಡಾ ಯಾರದ್ದೋ ದೊಡ್ಡ ಕನಸನ್ನು ನನಸು ಮಾಡಬಲ್ಲದು” ಎಂದು ಯಶ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಲಕ್ಷಾಂತರ ಮೆಚ್ಚುಗೆಗಳು ಹರಿದು ಬರುತ್ತಿವೆ.
ಪ್ರಭಾವಿಗೆ ಭೇಲ್ ಪುರಿ ಕೊಡಿಸಿದ ಪುಟ್ಟ ಬಾಲಕಿ ಇನ್ನೊಂದು ಅಚ್ಚರಿಯ ಘಟನೆಯಲ್ಲಿ, ಇನ್‌ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಒಬ್ಬರಿಗೆ ರಸ್ತೆಯ ಬದಿಯಲ್ಲಿ ವಾಸಿಸುವ ಪುಟ್ಟ ಬಾಲಕಿ ಭೇಲ್ ಪುರಿ ಕೊಡಿಸುವ ಮೂಲಕ ಸುದ್ದಿಯಾಗಿದ್ದಾಳೆ. “ನನ್ನ ಬಳಿ ಹಣವಿಲ್ಲ” ಎಂದು ಇನ್ಫ್ಲುಯೆನ್ಸರ್ ಹೇಳಿದಾಗ, ಬಾಲಕಿ ತನ್ನ ಜೇಬಿನಲ್ಲಿದ್ದ ಹಣವನ್ನು ತೆಗೆದು ಭೇಲ್ ಪುರಿ ಕೊಡಿಸಿದ್ದಾಳೆ. ಈ ವಿಡಿಯೋ ಬರೋಬ್ಬರಿ 24 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಡತನದಲ್ಲೂ ಇರುವ ಆ ಮಗುವಿನ ಶ್ರೀಮಂತ ಮನಸ್ಸಿಗೆ ಇಡೀ ದೇಶವೇ ಸಲಾಂ ಎನ್ನುತ್ತಿದೆ.
ಸಣ್ಣ ಕೆಲಸಗಳು ಹೇಗೆ ದೊಡ್ಡ ಬದಲಾವಣೆ ತರಬಲ್ಲವು ಎಂಬುದಕ್ಕೆ ಈ ಎರಡು ಘಟನೆಗಳು ಅತ್ಯುತ್ತಮ ಉದಾಹರಣೆಯಾಗಿವೆ.

