ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆದ ಮೂವರ ಶೂಟೌಟ್ ಪ್ರಕರಣ ಇದೀಗ ಮತ್ತಷ್ಟು ತಿರುವು ಪಡೆದುಕೊಂಡಿದೆ. ಪ್ರಕರಣದ ಬೆನ್ನಲ್ಲೇ ಅರಣ್ಯ ಇಲಾಖೆಯ ಆಂಟಿ ಪೋಚಿಂಗ್ ಕ್ಯಾಂಪ್‌ಗಳಿಗೆ ಜಿಲೆಟಿನ್ ಬಳಸಿ ಸ್ಫೋಟ ನಡೆಸಿರುವುದು ಹಾಗೂ ಪ್ರಕರಣದ ನಾಲ್ಕನೇ ಆರೋಪಿ ನಾಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಳ್ಳ ಬೇಟೆ ಶಿಬಿರ ಸ್ಪೋಟ
ಶೂಟೌಟ್ ಘಟನೆ ಬಳಿಕ ಕಾವೇರಿ ವನ್ಯಜೀವಿ ಧಾಮದ ಹೊಳೆ ಮುರುದಟ್ಟಿ ಕಳ್ಳಬೇಟೆ ತಡೆ ಶಿಬಿರ ಸೇರಿದಂತೆ ಅರಣ್ಯ ಇಲಾಖೆಯ ಹಲವು ಆಂಟಿ ಪೋಚಿಂಗ್ ಕ್ಯಾಂಪ್‌ಗಳಿಗೆ ದುಷ್ಕರ್ಮಿಗಳು ನುಗ್ಗಿ ಜಿಲೆಟಿನ್ ಬಳಸಿ ಸ್ಫೋಟ ನಡೆಸಿರುವ ಮಾಹಿತಿ ಹೊರಬಿದ್ದಿದೆ. ಒಳ್ಳಮರದ ಹಟ್ಟಿ, ಮತ್ತಿಪುರ, ಬೂದಿಕೆರೆ ಹಾಗೂ ಕಳ್ಳಿದೊಡ್ಡಿ ಕ್ಯಾಂಪ್‌ಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಹಲವು ಅನುಮಾನಗಳು ಮೂಡಿವೆ. ಶೂಟೌಟ್‌ಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆಯೇ? ಅರಣ್ಯದೊಳಗೆ ಇಷ್ಟೊಂದು ಪ್ರಮಾಣದ ಸ್ಫೋಟಕಗಳು ಹೇಗೆ ತಲುಪಿದವು? ಘಟನೆ ನಡೆದರೂ ಈ ಬಗ್ಗೆ ಮಾಹಿತಿ ತಡವಾಗಿ ಹೊರಬಂದಿದ್ದೇಕೆ? ಎಂಬ ಪ್ರಶ್ನೆಗಳು ಇದೀಗ ಚರ್ಚೆಗೆ ಕಾರಣವಾಗಿವೆ.
ನಾಲ್ಕನೇ ಆರೋಪಿ ನಾಪತ್ತೆ
ಇನ್ನು ಪ್ರಕರಣದ ನಾಲ್ಕನೇ ಆರೋಪಿ ಎನ್ನಲಾಗಿರುವ ಮಹಿಮ್ ದಾಸ್ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ನಾಪತ್ತೆಯಾಗಿರುವುದು ಮತ್ತೊಂದು ಗಂಭೀರ ವಿಚಾರವಾಗಿದೆ. ಆಸ್ಪತ್ರೆಯಲ್ಲಿದ್ದಾಗಲೇ ಆತನನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆಯದಿರುವುದೇಕೆ ಎಂಬ ಪ್ರಶ್ನೆಯೂ ಎದ್ದಿದೆ. ಸದ್ಯ ಮಹಿಮ್ ದಾಸ್ ಅಜ್ಞಾತ ಸ್ಥಳದಿಂದ ವಿಡಿಯೋಗಳನ್ನು ಹರಿಬಿಡುತ್ತಿರುವುದಾಗಿ ವರದಿಯಾಗಿದೆ.
ತನಿಖೆಯತ್ತ ಎಲ್ಲರ ಚಿತ್ತ
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹನೂರು ಶೂಟೌಟ್ ಪ್ರಕರಣದ ತನಿಖೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಎನ್‌ಕೌಂಟರ್ ನಡೆದ ಸಂದರ್ಭ, ಅರಣ್ಯ ಸಿಬ್ಬಂದಿಯ ಕ್ರಮ, ಕ್ಯಾಂಪ್‌ಗಳ ಮೇಲಿನ ದಾಳಿ ಹಾಗೂ ನಾಲ್ಕನೇ ಆರೋಪಿಯ ನಾಪತ್ತೆ—ಈ ಎಲ್ಲ ಅಂಶಗಳಿಗೂ ತನಿಖೆಯಿಂದ ಸ್ಪಷ್ಟ ಉತ್ತರ ಸಿಗಬೇಕಿದೆ. ಈ ಪ್ರಕರಣದಲ್ಲಿ ಈಗಾಗಲೇ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಸಮಗ್ರ ತನಿಖೆಯ ಮೂಲಕ ನಿಜಾಂಶ ಹೊರಬರಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.

