ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅನಾರೋಗ್ಯದಿಂದ ವಿಧಿವಶರಾಗಿದ್ದು, ನಾಳೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ತಾಯಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನಡೆಯಲಿರುವ ಜಾಗವನ್ನು ಶಾಸಕ ಹೆಚ್.ಡಿ. ರೇವಣ್ಣ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ರೇವಣ್ಣ, ಅಮ್ಮನನ್ನು ನೆನೆದು ಭಾವುಕರಾದರು. ತಾಯಿ ಚೆನ್ನಮ್ಮ ನನಗೆ ದೇವತೆ ಸಮಾನ. ನಾನು ನನ್ನ ದೇವರನ್ನೇ ಕಳೆದುಕೊಂಡಿದ್ದೇನೆ ಎಂದು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಗೋಳಾಡಿದ್ದಾರೆ.
ಎಷ್ಟೋ ಜನರಿಗೆ ಅನ್ನ ಹಾಕಿದ ಕೈ ಅವರದ್ದು. ಕೊನೆಯದಾಗಿ ತಿರುಪತಿ ಪ್ರಸಾದ ಕೊಟ್ಟು ಮಾತನಾಡಿಸಿದ್ದೆ. ವೈದ್ಯರು ನಿನ್ನೆ ಬೆಳಗ್ಗೆ ಅಮ್ಮ ಚೆನ್ನಮ್ಮ ಗುಣಮುಖ ಆಗ್ತಾರೆ ಎಂದಿದ್ದರು. ಆದರೆ ಅವರು ಬದುಕಿಬರಲಿಲ್ಲ ಎಂದು ಹೇಳುತ್ತಲೇ ಉಮ್ಮಳಿಸಿ ಬಂದ ದುಃಖ ತಡೆಯಲಾರದೆ ರೇವಣ್ಣ ಕಣ್ಣೀರಿಟ್ಟಿದ್ದಾರೆ.

