ಹಾಸನ: ಜಿಲ್ಲೆಯ ಹೊಳೆನರಸೀಪುರ ವ್ಯಾಪ್ತಿಯಲ್ಲಿ ನಡೆದ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮತ್ತು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಾತನಾಡುತ್ತಾ, ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
1990ರ ದಶಕದಲ್ಲಿ ಹೆಚ್.ಡಿ. ದೇವೇಗೌಡರಿಗೆ ರಾಜಕೀಯವಾಗಿ ಮರುಜನ್ಮ ನೀಡಿದ ಗ್ರಾಮಗಳ ಬಗ್ಗೆ ಸ್ಮರಿಸುತ್ತಾ ರೇವಣ್ಣ ಭಾವುಕರಾದರು . ಕುಮಾರಸ್ವಾಮಿ ಅವರ ಅವಧಿಯಲ್ಲಿ ಈ ಭಾಗದ ಹೋಬಳಿಗೆ ಸುಮಾರು 450 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ತಂದು ಕೆಲಸ ಮಾಡಿದ್ದೇವೆ ಮತ್ತು 140ಕ್ಕೂ ಹೆಚ್ಚು ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿದ್ದೇವೆ ಎಂದು ತಿಳಿಸಿದರ.
ಸರ್ಕಾರದ ವಿರುದ್ಧ ಆಕ್ರೋಶ: “ನನ್ನ ಜೀವನದಲ್ಲಿ ಇಷ್ಟು ಕೆಟ್ಟ ಸರ್ಕಾರವನ್ನು ನಾನು ನೋಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈಗ ನಡೆಯುತ್ತಿರುವ ಅನ್ಯಾಯಗಳಿಗೆ ಕಾಲ ಬಂದಾಗ “ಬಡ್ಡಿ ಸಮೇತ ತೀರಿಸುತ್ತೇನೆ” ಎಂದು ಗುಡುಗಿದರು. ರಸ್ತೆ ಕಾಮಗಾರಿ ವಿಚಾರದಲ್ಲಿ ಗ್ರಾಮಸ್ಥರ ಮೇಲೆ ದೂರು ದಾಖಲಿಸಲು ಒತ್ತಡ ಹೇರುತ್ತಿರುವ ಪೊಲೀಸ್ ಅಧಿಕಾರಿಗಳ ನಡೆಯನ್ನು ರೇವಣ್ಣ ಅವರು ತೀವ್ರವಾಗಿ ಖಂಡಿಸಿದರು. ಕ್ಷೇತ್ರದ ಜನರ ಮುಂದೆ ತಮ್ಮ ನೋವನ್ನು ತೋಡಿಕೊಂಡ ರೇವಣ್ಣ, ಅಧಿಕಾರಿಗಳು ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

