ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಹದಗೆಡಿಸಿದೆ ಎಂದು ಪುನರುಚ್ಚರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಹಣವಿಲ್ಲದ ಕಾರಣಕ್ಕೆ ಗ್ರೇಟರ್ ಬೆಂಗಳೂರು ಎಲೆಕ್ಷನ್ ಮಾಡುವುದಕ್ಕೂ ಈ ಸರ್ಕಾರಕ್ಕೆ ಹಣವಿಲ್ಲ ಎಂದು ನೇರ ಆರೋಪ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಯನ್ನು ಜೂನ್ 30ರ ಬದಲು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಜಾತಿಗಣತಿ ಮತ್ತು ಮತದಾರರ ಪಟ್ಟಿಯ ತಿದ್ದುಪಡಿ ಕಾರ್ಯಗಳಲ್ಲಿ ಸಿಬ್ಬಂದಿ ನಿರತರಾಗಿರುವುದು ಹಾಗೂ ಹಣಕಾಸಿನ ಕೊರತೆ ಇದಕ್ಕೆ ಕಾರಣವಾಗಿದ್ದು, ಆಯೋಗವು ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದೆ. ಅಲ್ಲಿಗೆ ರಾಜ್ಯ ಸರ್ಕಾರ ಆರ್ಥಿಕವಾಗಿ ದುರ್ಭರ ಸ್ಥಿತಿಯಲ್ಲಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ಉಚಿತ ಗ್ಯಾರಂಟಿಗಳನ್ನು ನೀಡಿದೆ ಸರಿ, ಆದರೆ ಈ ಗ್ಯಾರಂಟಿಗಳಿಂದ ಖಜಾನೆಯನ್ನು ಖಾಲಿ ಮಾಡಿದೆ. ಈಗಾಗಲೇ ರಾಜ್ಯದ ಒಟ್ಟು 7,26,000 ಲಕ್ಷ ಕೋಟಿ ಮೀರಿದೆ. ಪ್ರತಿ ಕನ್ನಡಿಗನ ಮೇಲೆಯೂ ತಲಾ ಒಂದು ಲಕ್ಷ ರೂಪಾಯಿ ಸಾಲವಿದೆ. ಈ ಸಾಲವನ್ನು ತೀರಿಸುವುದು ಹೇಗೆ? ಇಂತಹ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಸಾಧ್ಯ ಆಗುತ್ತದೆಯೇ? ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯುವುದಿಲ್ಲ. ಗ್ರೇಟರ್ ಬೆಂಗಳೂರು ಎಲೆಕ್ಷನ್ ಕೂಡ ಆಗುವುದಿಲ್ಲ. ಕರ್ನಾಟಕ ರಾಜ್ಯ ಚುನಾವಣಾ ಆಯೋಗವೇ ನ್ಯಾಯಾಲಯಕ್ಕೆ ಈ ಸರ್ಕಾರ ಹಣ ಕೊಡುತ್ತಿಲ್ಲ ಎಂದು ಹೇಳಿದೆ. ಇದಕ್ಕಿಂತ ದುಸ್ಥಿತಿ ಇನ್ನೇನಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಜನರು ಒಂದು ಕಡೆ ಕುಡಿಯುವ ನೀರಿನ ಸಮಸ್ಯೆಗೆ ತತ್ತರಿಸುತ್ತಿದ್ದರೆ, ಇನ್ನೊಂದು ಕಡೆ ಅಕಾಲಿಕ ಮಳೆಯಿಂದ ಭಾರೀ ಬೆಳೆ ನಷ್ಟಕ್ಕೆ ತುತ್ತಾಗಿದ್ದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಿಎಂ ಕುರ್ಚಿ ಕಾಳಗದಲ್ಲಿ ಮೈಮರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಕಿ ರೀತಿಯ ಬೇಸಿಗೆಯನ್ನು ನೋಡುತ್ತಿದ್ದೇವೆ. ಉಷ್ಣಗಾಳಿಗೆ ಜನರು ತತ್ತರಿಸುತ್ತಿದ್ದಾರೆ. ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ರೈತರು ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಜನರ ನೆರವಿಗೆ ಧಾವಿಸುವುದು ಇರಲಿ, ಅವರ ಬಗ್ಗೆ ಕನಿಕರದ ಮಾತನ್ನು ಕೂಡ ಆಡುತ್ತಿಲ್ಲ ಎಂದು ಕಿಡಿಕಾರಿದರು.
ಈ ಸರಕಾರಕ್ಕೆ ಜನರು ಎಂದರೆ ಭಯಭಕ್ತಿ ಇಲ್ಲವಾಗಿದೆ ಎಂದ ಅವರು, ಕೇವಲ ಗ್ಯಾರಂಟಿಗಳನ್ನು ಕೊಟ್ಟು ಜೀವನ ಉತ್ತಮಗೊಳಿಸಬಹುದು ಎಂದು ಆಡಳಿತ ನಡೆಸುವವರು ನಂಬಿದ್ದಾರೆ. ಆದರೆ, ಸ್ವಾಭಿಮಾನದ ಜನರನ್ನು ಪರಾವಲಂಬಿಗಳನ್ನಾಗಿ ಮಾಡಿ ಕೈಯೊಡ್ಡಿ ಬೇಡುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಭಾರತ ಜಗತ್ತಿನ ಮೂರನೇ ಬೃಹತ್ ಆರ್ಥಿಕ ಶಕ್ತಿ ಆಗುವತ್ತ ನಾಗಾಲೋಟದಲ್ಲಿ ಸಾಗುತ್ತಿದೆ. ಆದರೆ, ಕರ್ನಾಟಕ ಮಾತ್ರ ಕಾಂಗ್ರೆಸ್ ಕೈಗೆ ಸಿಕ್ಕಿ ಅಭಿವೃದ್ಧಿ ಹಿಮ್ಮುಖವಾಗಿ ಚಲಿಸುತ್ತಿದೆ. ಸಂಬಳ ಕೊಡುವುದಕ್ಕೂ ಕಷ್ಟ ಎನ್ನುವಂಥ ಧಾರುಣ ಪರಿಸ್ಥಿತಿಗೆ ರಾಜ್ಯವನ್ನು ತಂದು ನಿಲ್ಲಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

