ಸದ್ಯ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಬಾಲಿವುಡ್‌ನ ಧುರಂಧರ್ ದ ರಿವೇಂಜ್ ಚಿತ್ರದ ಅಬ್ಬರ ಜೋರಾಗಿದೆ. ಈ ಚಿತ್ರದ ಜತೆಗೆ ತೊಡೆ ತಟ್ಟಿ ಬಿಡುಗಡೆಯಾದ ತಮಿಳಿನ ಯೂಥ್ ಸಹ ಅಷ್ಟೇ ಮಟ್ಟಕ್ಕೆ ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ.
ಹೌದು, ಯುವ ಕಲಾವಿದ ಕೆನ್ ಕರುಣಾಸ್ ನಟಿಸಿ, ನಿರ್ದೇಶಿಸಿರುವ ಯೂಥ್ ಚಿತ್ರ ತಮಿಳುನಾಡಿನಲ್ಲಿ ಅಬ್ಬರಿಸಿದೆ. 20 ದಿನಕ್ಕೆ 60 ಕೋಟಿ ಗಳಿಕೆ ಮಾಡಿರುವ ಈ ಚಿತ್ರ ಸದ್ಯ ತೆಲುಗಿಗೂ ಸಹ ಡಬ್ ಆಗಿ ಬಿಡುಗಡೆಯಾಗಿದ್ದು, ಅಲ್ಲಿಯೂ ಸಹ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.
ಇನ್ನು ಬಿಡುಗಡೆಯಾದ ಮೇಲೆ ಚಿತ್ರದ ನಿರ್ದೇಶಕ ಹಾಗೂ ನಟ ಕೆನ್ ಕರುಣಾಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಬಿಡುಗಡೆಗೂ ಮುನ್ನ ಚಿತ್ರರಂಗದ ಕೆಲವರು ತಮ್ಮ ಚಿತ್ರಕ್ಕೆ ಯಾವ ರೀತಿ ಕೀಳುಮಟ್ಟದಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದರು ಎಂಬುದನ್ನು ನಟ ಕೆನ್ ಹಾಗೂ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಕುಮಾರ್ ಬಿಚ್ಚಿಟ್ಟಿದ್ದಾರೆ.
ಹೌದು, ನಟ ಕೆನ್ 25ರ ತರುಣ. ಈತ ನಿರ್ದೇಶನ ಮಾಡಲು ಆರಂಭಿಸಿದಾಗ 23 ವರ್ಷ. ಹೀಗಾಗಿ ಆ ಸಮಯದಲ್ಲಿ ತಮಿಳಿನ ಹಲವು ನಟಿಯರು ನಟಿಸಲು ಒಪ್ಪದೇ ಇದ್ದರಂತೆ. ಅಲ್ಲದೇ ಚಿತ್ರದ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಚಿತ್ರದ ಹಾಡುಗಳ ಹಕ್ಕನ್ನು ಮಾರಾಟ ಮಾಡಲು ಹಲವು ಕಂಪನಿಗಳನ್ನು ಸಂಪರ್ಕಿಸಿದಾಗ ಬೇಡಿಕೆಯ ಮೊತ್ತಕ್ಕೆ ಒಪ್ಪಿಗೆ ನೀಡದೇ ಯುವ ನಟನ ಚಿತ್ರಕ್ಕೆ ಅಷ್ಟೆಲ್ಲ ದುಡ್ಡು ಯಾರು ಕೊಡ್ತಾರೆ ಎಂದು ಹಂಗಿಸಿದ್ದರಂತೆ.
ಜಿವಿ ಪ್ರಕಾಶ್ ರೀತಿಯ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಇದ್ದರೂ ಸಹ ಆಡಿಯೊ ಕಂಪನಿಗಳು ಬೇಡಿಕೆಗೆ ಒಪ್ಪಲಿಲ್ಲವಂತೆ. ಹೀಗೆ ಹಂಗಿಸಿದ ಕೂಡಲೇ ದೃಢ ನಿರ್ಧಾರ ಮಾಡಿದ ಜಿವಿ ಪ್ರಕಾಶ್ ತನ್ನದೇ ಲೇಬಲ್‌ನಲ್ಲಿ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.
ಅದರಂತೆ ಮೊದಲು ಹಾಡು ‘ಮುಟ್ಟ ಕಲಕಿ’ಯನ್ನು ತಮ್ಮದೇ ಯುಟ್ಯೂಬ್ ಚಾನೆಲ್‌ನಲ್ಲಿ ಜಿವಿ ಪ್ರಕಾಶ್ ಬಿಡುಗಡೆಗೊಳಿಸಿದರು. ಈ ಹಾಡು ಬೇಗನೆ ವೈರಲ್ ಪಟ್ಟಿ ಧರಿಸಿ ಎಲ್ಲೆಡೆ ಸದ್ದು ಮಾಡಿತು. ಈಗಲೂ ಸಹ ಈ ಹಾಡಿನ ದರ್ಬಾರ್ ನಡೆಯುತ್ತಿದ್ದು, ಸಾಮಾಜಿಕ ಜಾಲತಾಣದ ತುಂಬಾ ಈ ಹಾಡಿನದ್ದೇ ಸದ್ದು. ಹೀಗೆ ಹಾಡು ವೈರಲ್ ಆಗುತ್ತಿದ್ದಂತೆ ಯಾವ ಕಂಪನಿಗಳು ಅಷ್ಟು ದುಡ್ಡು ಯಾರು ಕೊಡ್ತಾರೆ ಎಂದಿದ್ದರೋ ಅವರೇ ಮತ್ತೆ ಕರೆ ಮಾಡಿ ಐದು ಪಟ್ಟು ಹೆಚ್ಚು ಕೊಡುತ್ತೇವೆ ನಮಗೆ ಆಡಿಯೊ ಹಕ್ಕು ಕೊಡಿ ಎಂದು ಕೇಳಲಾರಂಭಿಸಿವೆ. ಆದರೆ ಇದಕ್ಕೆ ಜಗ್ಗದ ಜಿವಿ ಪ್ರಕಾಶ್ ಅಷ್ಟೆಲ್ಲ ಹಂಗಿಸಿ ಯುವ ನಟನನ್ನು ಕಡೆಗಣಿಸಿದ ಅವರಿಗೆ ನಾನು ಆಡಿಯೊ ಹಕ್ಕು ಕೊಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.
https://www.instagram.com/reel/DWT6u7zjlnO/?igsh=MXVlZ2J3ZndqbTZ0dA==

