ರಸ್ತೆಯ ಮಧ್ಯೆ ಅಡ್ಡಲಾಗಿ ಕುಳಿತಿದ್ದ ಹಸುವನ್ನು ಪಕ್ಕಕ್ಕೆ ಸರಿಸಲು ಕಾಲಿನಿಂದ ತಳ್ಳಿದ ಕಾರಣಕ್ಕಾಗಿ ವೃದ್ಧನೊಬ್ಬನಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳಿಸಿದ ಘಟನೆ ಮಧ್ಯಪ್ರದೇಶದ ಗುಣಾ ಜಿಲ್ಲೆಯ ಜಾಮ್ನೇರ್ ಪಟ್ಟಣದಲ್ಲಿ ನಡೆದಿದೆ. ಸಾಮಾನ್ಯ ಜಾನುವಾರು ಸಮಸ್ಯೆಯೊಂದು ನೋಡನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿ, ಸಂಘಟನೆಯ ಕಾರ್ಯಕರ್ತರು ವೃದ್ಧನಿಂದ ಹಸುವಿನ ಕಾಲಿಗೆ ಬೀಳಿಸಿ ಮೂಗು ತಿಕ್ಕಿಸಿ ಕ್ಷಮೆ ಕೇಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಗುಣಾ ಕಂಟೋನ್ಮೆಂಟ್ ನಿವಾಸಿಯಾಗಿರುವ ಜಮೀಲುದ್ದೀನ್ ಎಂಬ ಹಿರಿಯ ವ್ಯಕ್ತಿ ಜಾಮ್ನೇರ್ ಪಟ್ಟಣದ ನಿವಾಸಿಯೊಬ್ಬರ ಮನೆಗೆ ಸರಕು ತಲುಪಿಸಲು ವಾಹನದಲ್ಲಿ ಬಂದಿದ್ದರು. ವಾಹನದಿಂದ ವಸ್ತುಗಳನ್ನು ಕೆಳಗೆ ಇಳಿಸುವ ಸಂದರ್ಭದಲ್ಲಿ ರಸ್ತೆಯಲ್ಲಿ ಹಸುವೊಂದು ಅಡ್ಡಲಾಗಿ ಮಲಗಿತ್ತು. ಸರಕು ಸಾಗಿಸಲು ದಾರಿ ಮಾಡಿಕೊಳ್ಳುವ ಉದ್ದೇಶದಿಂದ ಅವರು ಕಾಲಿನಿಂದ ಹಸುವನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಇದನ್ನು ಕಂಡ ಬಜರಂಗದಳ ಹಾಗೂ ಕೆಲವು ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಗೋಮಾತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳದಲ್ಲಿ ಜಮಾಯಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳೀಯ ಕುಟುಂಬವೊಂದು ಆ ವೃದ್ಧನ ರಕ್ಷಣೆಗೆ ಧಾವಿಸಿ ತಮ್ಮ ಮನೆಯೊಳಗೆ ಆಶ್ರಯ ನೀಡಿತು.
ಆದರೆ ಮನೆಯಿಂದ ಹೊರಬಂದ ನಂತರ ಗುಂಪು ಅವರ ಮೇಲೆ ಮುಗಿಬಿದ್ದು, ಹಸುವಿನ ಎದುರು ಬಲವಂತವಾಗಿ ತಲೆಬಾಗಿಸಿ, ನೆಲದ ಮೇಲೆ ಮೂಗು ತಿಕ್ಕಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ ಎನ್ನಲಾಗಿದೆ. ಈ ಇಡೀ ಕೃತ್ಯವನ್ನು ಮೊಬೈಲ್ ಫೋನ್ ಮೂಲಕ ಚಿತ್ರೀಕರಿಸಲಾಗಿದ್ದು, ಆ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಾಮ್ನೇರ್ ಠಾಣಾಧಿಕಾರಿಗಳು, ಈ ಘಟನೆ ನಡೆದು ನಾಲ್ಕು ದಿನಗಳು ಕಳೆದಿವೆ ಎಂದು ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಜನರು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ವೃದ್ಧರೇ ಸ್ವಯಂಪ್ರೇರಿತರಾಗಿ ಕ್ಷಮೆ ಕೇಳಿದ್ದಾರೆ ಎಂದು ಹೇಳಿರುವ ಪೊಲೀಸರು, ಈ ಸಂಬಂಧ ಯಾರೊಬ್ಬರೂ ಲಿಖಿತ ದೂರು ನೀಡದ ಕಾರಣ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತೊಂದೆಡೆ, ಸಂತ್ರಸ್ತ ವೃದ್ಧರು ಪೊಲೀಸರ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ತಾವು ನ್ಯಾಯ ಕೇಳಲು ಠಾಣೆಗೆ ಹೋದಾಗ ಪೊಲೀಸರು ರಕ್ಷಣೆ ನೀಡುವ ಬದಲು ತಮ್ಮ ಮೇಲೆಯೇ ಒತ್ತಡ ಹೇರಿದ್ದಾರೆ ಎಂದು ಅವರು ದೂರಿದ್ದಾರೆ. ಯಾವುದೇ ಮುಂದಿನ ಕಾನೂನು ಕ್ರಮ ಬಯಸುವುದಿಲ್ಲ ಹಾಗೂ ತಾವೇ ಸ್ವತಃ ಕ್ಷಮೆ ಯಾಚಿಸಿದ್ದಾಗಿ ಕಾಗದದ ಮೇಲೆ ಬಲವಂತವಾಗಿ ಸಹಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ತಮಗೆ ಸಾರ್ವಜನಿಕವಾಗಿ ಆದ ತೀವ್ರ ಅಪಮಾನ ಹಾಗೂ ದೌರ್ಜನ್ಯದ ವಿರುದ್ಧ ಶೀಘ್ರದಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿ ನ್ಯಾಯಕ್ಕಾಗಿ ಹೋರಾಡುವುದಾಗಿ ಅವರು ತಿಳಿಸಿದ್ದಾರೆ.

