ಪಂಚಮಹಲ್: ಕಾರ್ಗೋ ರೋಪ್ ವೇ ಕುಸಿದು ಬಿದ್ದ ಪರಿಣಾಮ 6 ಜನರು ಸಾವನ್ನಪ್ಪಿರುವ ಘಟನೆ ಗುಜರಾತ್ ನ ಪಂಚಮಹಲ್ ಜಿಲ್ಲೆಯ ಪಾವಗಡ ಬೆಟ್ಟದ ದೇವಸ್ಥಾನದ ಬಳಿ ನಡೆದಿದೆ.
ನಿರ್ಮಾಣ ಕಾಮಗಾರಿಗಾಗಿ ರೋಪ್ ವೇ ಟ್ರಾಲಿಯಲ್ಲಿ ಕೆಲ ವಸ್ತುಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ರೋಪ್ ವೇ ಟ್ರಾಲಿ ಏಕಾಏಕಿ ಮುರಿದು ಬಿದ್ದಿದೆ. ಸ್ಥಳದಲ್ಲೇ 6 ಜನರು ಸಾವನ್ನಪ್ಪಿದ್ದಾರೆ. ಪಾವಗಡ ಬೆಟ್ಟದ ಶಕ್ತಿಪೀಠದ ಬಳಿ ಈ ದುರಂತ ಸಂಭವಿಸಿದೆ.
ಮೃತರ ಪೈಕಿ ಇಬ್ಬರು ಲಿಫ್ಟ್ ಆಪರೇಟರ್ ಗಳು, ಇಬ್ಬರು ಕಾರ್ಮಿಕರು ಹಾಗೂ ಇತರ ಇಬ್ಬರು ಎಂದು ಗುರುತಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಡಿಸಿಪಿ ಹರ್ಷ ದುಧಾರ್ ತಿಳಿಸಿದ್ದಾರೆ.
ಪಾವಗಡ ಬೆಟ್ಟದ ದೇವಾಲಯ ಕಾಳಿ ಮಾತೆಗೆ ಸೇರಿದ ದೇವಾಲಯವಾಗಿದ್ದು, ಶಕ್ತಿಪೀಠ ಎಂದೇ ಪ್ರಸಿದ್ಧಿಪಡೆದಿದೆ. ಈ ದೇವಾಲಯಕ್ಕೆ ಹೋಗಬೇಕಾದರೆ ಯಾತ್ರಿಕರು 2000 ಮೆಟ್ಟಿಲುಗಳನ್ನು ಹತ್ತಬೇಕು ಇಲ್ಲವೇ ಕೇಬಲ್ ಕಾರುಗಳ ಮೂಲಕ ಸಾಗಿ ದೇವರ ದರ್ಶನ ಪಡೆಯಬೇಕು. ಇಂದು ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ, ಯಾತ್ರಿಕರಿಗೆ ರೋಪ್ ವೇ ಸ್ಥಗಿತಗೊಳಿಸಲಾಗಿತ್ತು. ರೋಪ್ ವೇ ನಲ್ಲಿ ಕಟ್ಟಡ ಸಾಮಗ್ರಿ ಸಾಗಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.