ಮೈಸೂರು : ಮೈಸೂರಿನ ಹಳೆ ಕೆಸರೆ ಗ್ರಾಮದಲ್ಲಿ ಸಣ್ಣ ಕಾರಣಕ್ಕೆ ಶುರುವಾದ ಕೌಟುಂಬಿಕ ಕಲಹವೊಂದು ಕೊಲೆಯಲ್ಲಿ ಅಂತ್ಯವಾಗಿದೆ. ಪತ್ನಿಯನ್ನು ಕ್ರೂರವಾಗಿ ಹತ್ಯೆ ಮಾಡಿದ ಪತಿ ನಂತರ ಪೊಲೀಸರಿಗೆ ಶರಣಾಗಿದ್ದಾನೆ.
ಕೊಲೆಯಾದ ಮಹಿಳೆಯನ್ನು ಪುಷ್ಪ (24) ಎಂದು ಗುರುತಿಸಲಾಗಿದೆ. ಇವರು ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ಖಾಸಗಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಪತಿ ಮಹೇಶ್ ಎಂಬಾತನೇ ಈ ಕೃತ್ಯ ಎಸಗಿದ ಹಂತಕ. ಪತ್ನಿ ಪುಷ್ಪ ಕೆಲಸ ಮುಗಿಸಿ ಮನೆಗೆ ತಡವಾಗಿ ಬರುತ್ತಿದ್ದಾಳೆ ಎಂಬ ಸಂಶಯ ಮಹೇಶ್ನನ್ನು ಕಾಡುತ್ತಿತ್ತು. ಈ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಬುಧವಾರ ರಾತ್ರಿ ಕೂಡ ಇದೇ ವಿಷಯಕ್ಕೆ ಗಲಾಟೆ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಮಹೇಶ್, ಮನೆಯಲ್ಲಿದ್ದ ಕೊಡಲಿಯಿಂದ ಪುಷ್ಪ ಅವರ ತಲೆಗೆ ಹೊಡೆದಿದ್ದಾನೆ. ಅಷ್ಟಕ್ಕೇ ನಿಲ್ಲದೆ, ನಂತರ ದಿಂಬಿನಿಂದ ಆಕೆಯ ಮುಖವನ್ನು ಒತ್ತಿ ಹಿಡಿದು ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಹತ್ಯೆಯ ನಂತರ ಪಾಪಪ್ರಜ್ಞೆ ಕಾಡಿದೆಯೋ ಅಥವಾ ಕಾನೂನಿನ ಭಯವೋ, ಮಹೇಶ್ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ತನ್ನ ತಪ್ಪನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ಮೈಸೂರಿನ ಎನ್.ಆರ್. ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

