ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಗೃಹಲಕ್ಷ್ಮೀ ಯೋಜನೆಗೆ ಮೂರು ವರ್ಷ ತುಂಬುತ್ತಿರುವ ಬೆನ್ನಲ್ಲೇ ಫಲಾನುಭವಿಗಳಿಗೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆಗೆ ಸರ್ಕಾರ ಮುಂದಾಗಿದ್ದು, ಸರ್ವೆ ಪೂರ್ಣಗೊಳ್ಳುವವರೆಗೂ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆಗೆ ಸಂಬಂಧಿಸಿದಂತೆ ಸರ್ಕಾರ ಆಗಸ್ಟ್ 31ರಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿ ಬಿಡುಗಡೆಯಾದ ಬಳಿಕ ಸುಮಾರು ಮೂರು ದಿನಗಳಲ್ಲಿ ಸರ್ವೆ ಆರಂಭವಾಗಲಿದೆ ಎಂದು ವರದಿ ತಿಳಿಸಿದೆ.
ಅನರ್ಹ ಫಲಾನುಭವಿಗಳ ಪತ್ತೆಗೆ ಸರ್ವೆ
ಮರುಪರಿಶೀಲನಾ ಸರ್ವೆ ಮೂಲಕ ಯೋಜನೆಗೆ ಅರ್ಹರಲ್ಲದ ಫಲಾನುಭವಿಗಳನ್ನು ಪತ್ತೆಹಚ್ಚಲು ಸರ್ಕಾರ ಮುಂದಾಗಿದೆ. ಸರ್ವೆ ಪೂರ್ಣಗೊಂಡು ಅನರ್ಹ ಫಲಾನುಭವಿಗಳನ್ನು ಗುರುತಿಸಿದ ಬಳಿಕ ಗೃಹಲಕ್ಷ್ಮೀ ಹಣ ಪಾವತಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಬಯೋಮೆಟ್ರಿಕ್ ಮತ್ತು ಫೇಶಿಯಲ್ ದೃಢೀಕರಣ
ಸರ್ಕಾರದ ಆದೇಶದ ಪ್ರಕಾರ, ಗೃಹಲಕ್ಷ್ಮೀ ಫಲಾನುಭವಿಗಳ ಮರು ಪರಿಶೀಲನೆಯನ್ನು ಬಯೋಮೆಟ್ರಿಕ್ ಹಾಗೂ ಫೇಶಿಯಲ್ ಅಥೆಂಟಿಕೇಷನ್ ಮೂಲಕ ನಡೆಸಲಾಗುತ್ತದೆ. ಮನೆ-ಮನೆ ಸಮೀಕ್ಷೆ ನಡೆಸಿ ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ.
ಪರಿಶೀಲನಾ ಪ್ರಕ್ರಿಯೆಯನ್ನು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ CSC ಕೇಂದ್ರಗಳ ಮೂಲಕವೂ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮರು ಪರಿಶೀಲನಾ ಕಾರ್ಯಕ್ಕೆ ಸರ್ಕಾರ ₹20 ಕೋಟಿ ಅನುದಾನ ನಿಗದಿಪಡಿಸಿದೆ. ಹೀಗಾಗಿ ಗೃಹಲಕ್ಷ್ಮೀ ಫಲಾನುಭವಿಗಳು ಸರ್ವೆ ಕುರಿತು ಹೊರಬರುವ ಅಧಿಕೃತ ಮಾರ್ಗಸೂಚಿಗಳನ್ನು ಗಮನಿಸಿ, ಅಗತ್ಯ ದಾಖಲೆಗಳು ಹಾಗೂ ದೃಢೀಕರಣಕ್ಕೆ ಸಿದ್ಧರಾಗಿರುವುದು ಸೂಕ್ತ.

