ಬೆಂಗಳೂರು: ರಾಜ್ಯದ ಬಿಪಿಎಲ್ ಪಡಿತರ ಚೀಟಿದಾರರಿಗೆ ಮೇ ತಿಂಗಳಿಂದ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಜತೆಗೆ ರಾಗಿ ಮತ್ತು ಜೋಳವನ್ನು ವಿತರಿಸಲಾಗುವುದು. ಸದ್ಯ ಪ್ರತಿ ವ್ಯಕ್ತಿಗೆ ರಾಜ್ಯದಿಂದ 5 ಕೆಜಿ, ಕೇಂದ್ರದಿಂದ 5 ಕೆಜಿ ಸೇರಿ ಒಟ್ಟು 10 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಈ ಪೈಕಿ ಪಡಿತರ ಚೀಟಿದಾರರಿಗೆ ಎರಡು ಅಥವಾ ಮೂರು ಕೆಜಿ ರಾಗಿ ಅಥವಾ ಜೋಳ ನೀಡಲು ಆಹಾರ ಇಲಾಖೆ ನಿರ್ಧರಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಕೋಟ್ಯಂತರ ಜನರಿಗೆ ಉಚಿತವಾಗಿ ತಲಾ 10 ಕೆಜಿ ಅಕ್ಕಿ ವಿತರಿಸುತ್ತಿದ್ದು, ಇದರೊಂದಿಗೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ 3 ಕೆಜಿ ರಾಗಿ ಹಾಗೂ 2 ಕೆಜಿ ಅಕ್ಕಿ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 3 ಕೆಜಿ ಜೋಳ ಮತ್ತು 2 ಕೆಜಿ ಅಕ್ಕಿ ನೀಡಲಾಗುವುದು.
ಫಲಾನುಭವಿಗಳಿಗೆ ನೀಡುತ್ತಿರುವ ಒಟ್ಟು ಪ್ರಮಾಣದಲ್ಲಿ ಪದಾರ್ಥಗಳನ್ನು ಬದಲಾವಣೆ ಮಾಡಲಾಗುತ್ತದೆ. ಕೆಲವು ಭಾಗದಲ್ಲಿ ರಾಗಿ ಬಳಕೆ ಮಾಡಿದರೆ ಮತ್ತೆ ಕೆಲವು ಕಡೆ ಜೋಳ ಬಳಸುತ್ತಾರೆ. ಹೀಗಾಗಿ ಜನ ಏನನ್ನು ಇಷ್ಟಪಡುತ್ತಾರೋ ಅದನ್ನೇ ನೀಡಲಾಗುವುದು ಎಂದು ಹೇಳಲಾಗಿದೆ.
ರೈತರಿಂದ ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ ಜೋಳವನ್ನು ಖರೀದಿಸಿ ಸಂಗ್ರಹಿಸಲಾಗುತ್ತಿದೆ. ಮೇ ತಿಂಗಳವರೆಗೆ ಖರೀದಿ ನಡೆಯಲಿದ್ದು, 10 ತಿಂಗಳಿಗೆ ವಿತರಿಸುವಷ್ಟು ರಾಗಿ, ಜೋಳ ಖರೀದಿಸಿ ಸಂಗ್ರಹಿಸಿ ಇಡಲಾಗುತ್ತದೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ರಾಗಿ, ಜೋಳ ವಿತರಣೆ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳವನ್ನು ಕೇಂದ್ರದ ಅನುಮತಿ ಮೇರೆಗೆ ಮೇ ತಿಂಗಳಿನಿಂದ ವಿತರಿಸಲಾಗುವುದು.