ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ (Central Government Employees) ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ತುಟ್ಟಿಭತ್ಯೆ (DA) ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸಂಪುಟವು ಮಹತ್ವದ ನಿರ್ಧಾರ ಕೈಗೊಂಡಿದೆ.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಕೇಂದ್ರ ಸರ್ಕಾರಿ ನೌಕರರು ಮತ್ತು ಪೆನ್ಷನರ್ಗಳ ಡಿಎ ಹೆಚ್ಚಳದ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಅಂತಿಮವಾಗಿ ಇಬ್ಬರಿಗೂ ಅನುಕೂಲವಾಗುವಂತೆ ಶೇ. 2 ರಷ್ಟು ಡಿಎ ಹೆಚ್ಚಳಕ್ಕೆ ಸಂಪುಟವು ಅನುಮೋದನೆ ನೀಡಿದೆ.
ಇದರೊಂದಿಗೆ ಹೆಚ್ಚುವರಿ ಶೇ. 2 ರಷ್ಟು ತುಟ್ಟಿಭತ್ಯೆಯು ಶೀಘ್ರದಲ್ಲೇ ಕೇಂದ್ರ ಸರ್ಕಾರಿ ನೌಕರರು ಹಾಗೂ ಪೆನ್ಷನರ್ಗಳ ಕೈ ಸೇರಲಿದೆ. ಸರ್ಕಾರದ ಈ ನಿರ್ಧಾರಕ್ಕೆ ನೌಕರ ವಲಯದಲ್ಲಿ ಹರ್ಷ ವ್ಯಕ್ತವಾಗಿದೆ. “ಬಹಳ ದಿನಗಳಿಂದ ಡಿಎ ಹೆಚ್ಚಳದ ನಿರೀಕ್ಷೆಯಲ್ಲಿದ್ದ ನಮಗೆ ಕೇಂದ್ರ ಸರ್ಕಾರವು ಯುಗಾದಿ ಹಬ್ಬದ ಬೆನ್ನಲ್ಲೇ ಸಿಹಿಸುದ್ದಿ ನೀಡಿದೆ” ಎಂದು ನೌಕರರು ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಬೆಂಬಲವಾಗಿ ನಿಂತಿರುವ ಮೋದಿ ಸರ್ಕಾರಕ್ಕೆ ನೌಕರರು ಮತ್ತು ಪೆನ್ಷನರ್ಗಳು ಕೃತಜ್ಞತೆ ಸಲ್ಲಿಸಿದ್ದಾರೆ.

