ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳಿಗೆ ಖಾತೆ ಮಾಡಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಯುವಕನೊಬ್ಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಕ್ತದಲ್ಲಿ ಪತ್ರ ಬರೆದಿರುವ ಘಟನೆ ಗಮನ ಸೆಳೆದಿದೆ.
ಪ್ರಸ್ತುತ ರೆವಿನ್ಯೂ ಹಾಗೂ ಕನ್ವರ್ಷನ್ ಜಾಗಗಳಿಗೆ ಖಾತೆ ಮಾಡಿಸಲು ನಿರ್ಬಂಧ ಇರುವುದರಿಂದ ಜನಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಾಸನಪುರ ಹೋಬಳಿಯ ಹೊಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮುನಿರಾಜು ಬಿ.ಸಿ. ಎಂಬುವರು ತಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲು ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಖಾಲಿ ನಿವೇಶನಗಳಿಗೆ ಹಲವು ವರ್ಷಗಳಿಂದ ಖಾತೆ ಮಾಡಿಸಲು ಅವಕಾಶವಿಲ್ಲದಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಮುನಿರಾಜು ತಿಳಿಸಿದ್ದಾರೆ.
“ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಮುನಿರಾಜು ಬಿ.ಸಿ., ಪಿ.ಡಬ್ಲ್ಯೂ.ಡಿ., ದಾಸನಪುರ ಹೋಬಳಿ, ಹೊಸ್ಕೂರು ಗ್ರಾಮ ಪಂಚಾಯಿತಿಗೆ ಸೇರಿದವನಾಗಿರುತ್ತೇನೆ. ಸ್ವಾಮಿ, ನಮ್ಮ ರಾಜ್ಯದಲ್ಲಿ ಸುಮಾರು ವರ್ಷಗಳಿಂದ ಪಂಚಾಯಿತಿ ಪರಿಮಿತಿಯಲ್ಲಿ ಬರುವ ಖಾಲಿ ನಿವೇಶನಗಳಿಗೆ ಖಾತೆ ಮಾಡಲು ಅನುಮತಿಯನ್ನು ನೀಡಬೇಕು. ಇದಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಅತೀ ಜರೂರಾಗಿ ಮಾಡಬೇಕೆಂದು ತಮ್ಮಲ್ಲಿ ವಿನಮ್ರವಾಗಿ ಬೇಡಿಕೊಳ್ಳುತ್ತೇನೆ” ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಜನಸಾಮಾನ್ಯರಿಗೆ ತೊಂದರೆ
ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನಗಳಿಗೆ ಖಾತೆ ಮಾಡಿಸಲು ಅವಕಾಶ ಇಲ್ಲದಿರುವುದರಿಂದ ಆಸ್ತಿ ಮಾಲೀಕರು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಈ ವಿಚಾರವನ್ನು ಪರಿಶೀಲಿಸಿ ಇ-ಖಾತೆ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಯುವಕನ ಆಗ್ರಹವಾಗಿದೆ.
ರಕ್ತದಲ್ಲಿ ಪತ್ರ ಬರೆದು ಮುಖ್ಯಮಂತ್ರಿಗಳ ಗಮನ ಸೆಳೆಯಲು ಪ್ರಯತ್ನಿಸಿರುವ ಈ ಘಟನೆ ಇದೀಗ ಚರ್ಚೆಗೆ ಕಾರಣವಾಗಿದೆ.

