ಬಾಲಿವುಡ್‌ನ ಸಸಾರ್ವಕಾಲಿಕ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದಾದ ‘ದಿಲ್ ಚಾಹ್ತಾ ಹೈ’ ತೆರೆಕಂಡು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರತಂಡ ಮುಂಬೈನಲ್ಲಿ ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವಿಶೇಷ ಸಮಾರಂಭದಲ್ಲಿ ಆಮಿರ್ ಖಾನ್, ಸೈಫ್ ಅಲಿ ಖಾನ್, ನಿರ್ದೇಶಕ ಫರ್ಹಾನ್ ಅಖ್ತರ್, ಸೋನಾಲಿ ಕುಲಕರ್ಣಿ, ಡಿಂಪಲ್ ಕಪಾಡಿಯಾ ಹಾಗೂ ನಿರ್ಮಾಪಕ ರಿತೇಶ್ ಸಿಧ್ವಾನಿ ಭಾಗವಹಿಸಿ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಪುರುಷರ ಸ್ನೇಹ ಮತ್ತು ಜೀವನಶೈಲಿಯನ್ನು ಹೊಸ ರೀತಿಯಲ್ಲಿ ತೆರೆಮೇಲೆ ತಂದಿದ್ದ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದೇಕೆ ಎಂಬುದನ್ನು ಹಿರಿಯ ನಟಿ ಡಿಂಪಲ್ ಕಪಾಡಿಯಾ ತಮಾಷೆಯಾಗಿ ವಿವರಿಸಿದ್ದಾರೆ. ಚಿತ್ರದ ಕಥೆ ಕೇಳಿದ ತಕ್ಷಣವೇ ನನಗೆ ತುಂಬಾ ಇಷ್ಟವಾಯಿತು. ನನಗಿಂತ ಕಿರಿಯ ವಯಸ್ಸಿನ ಯುವಕ ನನ್ನನ್ನು ಪ್ರೀತಿಸುವ ಪಾತ್ರ ಎಂದಾಗ ನನ್ನ ಅಹಂಗೆ ಕೊಂಚ ಹೆಮ್ಮೆ ಎನಿಸಿತು ಎಂದು ನಗುತ್ತಾ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಈ ಪಾತ್ರ ಮಾಡುವುದು ನನಗೆ ಕೊಂಚ ಸವಾಲಿನಿಂದ ಕೂಡಿತ್ತು. ಹೀಗಾಗಿ ಆರಂಭದಲ್ಲಿ ನಾನು ಈ ಪಾತ್ರದಿಂದ ಹಿಂದೆ ಸರಿಯಲು ಯತ್ನಿಸಿದ್ದೆ. ಬೇರೆ ನಟಿಯರ ಹೆಸರುಗಳನ್ನು ಕೂಡ ಶಿಫಾರಸು ಮಾಡಿದ್ದೆ. ಆದರೆ ಕೊನೆಗೆ ಈ ಪಾತ್ರವನ್ನು ನಾನೇ ಮಾಡಬೇಕಾಯಿತು. ಅದಕ್ಕಾಗಿ ದೇವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರು ಡಿಂಪಲ್ ಕಪಾಡಿಯಾ ಅವರ ಪಾತ್ರವನ್ನು ಪ್ರೀತಿಸುವ ಯುವಕನಾಗಿ ಕಾಣಿಸಿಕೊಂಡಿದ್ದರು.
ಇದೇ ವೇಳೆ ನಟ ಸೈಫ್ ಅಲಿ ಖಾನ್ ಕೂಡ ಗೋವಾ ಶೂಟಿಂಗ್ ದಿನಗಳ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಫರ್ಹಾನ್ ಅಖ್ತರ್ ಅವರ ನಿರ್ದೇಶನದ ಶೈಲಿ ಮತ್ತು ಚಿತ್ರೀಕರಣದ ಸಮಯದಲ್ಲಿ ಇಡೀ ತಂಡ ಎಷ್ಟು ಸಂತೋಷದಿಂದ ಕೆಲಸ ಮಾಡಿತು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ.

