ಧಾರವಾಡ: ಧಾರವಾಡದ ಗಿರಿನಗರದಲ್ಲಿ ಬಿಎಸ್ಸಿ ಪದವಿ ವಿದ್ಯಾರ್ಥಿ ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಪ್ರಕರಣದಲ್ಲಿ ಕಿರುಕುಳ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ವಿದ್ಯಾಗಿರಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಚಂದ್ರು ನಡುವಿನಮನಿ, ಕಿರಣ್ ಡೋಕನವರ, ಸೈಯದ್ ತಹಶೀಲ್ದಾರ್ ಅವರನ್ನು ಅಮಾನತು ಮಾಡಲಾಗಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರು ಗ್ರಾಮದ ಆದಿತ್ಯ ಮ್ಯಾಗೇರಿ ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದ. ಗಿರಿನಗರದಲ್ಲಿ ಸ್ನೇಹಿತರೊಂದಿಗೆ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ. ಶನಿವಾರ ಪೊಲೀಸರು ಗಾಂಜಾ ಡ್ರೈವ್ ತಪಾಸಣೆ ವೇಳೆ ಆದಿತ್ಯ ಸೇರಿ ಹಲವು ವಿದ್ಯಾರ್ಥಿಗಳನ್ನು ಗಾಂಜಾ ಸೇವನೆ ಆರೋಪದಡಿ ವಶಕ್ಕೆ ಪಡೆದು ಪರಿಶೀಲನೆಗೆ ಒಳಪಡಿಸಿದ್ದರು. ಆದಿತ್ಯ ಗಾಂಜಾ ಸೇವನೆ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ವರದಿ ಬಂದಿತ್ತು.
ನೆಗೆಟಿವ್ ವರದಿ ಬಂದಿದ್ದ ಆದಿತ್ಯ ಸೇರಿದಂತೆ ಹಲವು ವಿದ್ಯಾರ್ಥಿಗಳ ಬಳಿ ಪೊಲೀಸರು ಹಣ ವಸೂಲಿ ಮಾಡಿದ್ದಾರೆ. ಪೊಲೀಸರಿಗೆ ಹಣ ಕೊಡಲು 2,000 ರೂ. ಕೊಡುವಂತೆ ಆದಿತ್ಯ ತಾಯಿಯ ಬಳಿ ಕೇಳಿದ್ದ. ಆದರೆ, ತಾಯಿ ಹಣ ಕೊಡಲು ನಿರಾಕರಿಸಿದಾಗ ಪೊಲೀಸರ ಭಯದಿಂದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಸಾವಿಗೆ ಪೊಲೀಸರ ಕಿರುಕುಳ ಕಾರಣವೆಂದು ಆದಿತ್ಯನ ತಾಯಿ ಕವಿತಾ ಮ್ಯಾಗೇರಿ ಆರೋಪಿಸಿ ದೂರು ನೀಡಿದ್ದಾರೆ.
ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಪೊಲೀಸರನ್ನು ಅಮಾನತು ಮಾಡಲಾಗಿದ್ದು, ಡಿಸಿಪಿ ಶ್ರುತಿ ಪ್ರಕರಣದ ತನಿಖೆ ನಡೆಸಿದ್ದಾರೆ. ತನಿಖೆ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.

