HomeKarnatakaಗಮನಿಸಿ : ನವೆಂಬರ್ 6 ರವರೆಗೆ ಪದವೀಧರ ಮತದಾರರ ನೋಂದಣಿಗೆ ಅವಕಾಶ

ಗಮನಿಸಿ : ನವೆಂಬರ್ 6 ರವರೆಗೆ ಪದವೀಧರ ಮತದಾರರ ನೋಂದಣಿಗೆ ಅವಕಾಶ

ಬಳ್ಳಾರಿ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ದಪಡಿಸಲಾಗುತ್ತಿರುವುದರಿಂದ ಈ ಹಿಂದಿನ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಸಹ ನಮೂನೆ-18ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾಗಿರುವ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕಲಬುರಗಿ ಪ್ರಾದೇಶಿಕ ಆಯುಕ್ತರು ಹಾಗೂ ಮತದಾನ ನೋಂದಣಾಧಿಕಾರಿಗಳು ಸಹ ಈ ನಿಟ್ಟಿನಲ್ಲಿ ಆಯೋಗದ ಸೂಚನೆಯನ್ವಯ ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಕಾರ್ಯಪ್ರವೃತ್ತರಾಗಲು ಸೂಚಿಸಿರುತ್ತಾರೆ. ಭಾರತ ಚುನಾವಣಾ ಆಯೋಗವು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯನ್ನಾಗಿ ಹಾಗೂ ಈ ಚುನಾವಣಾ ಕ್ಷೇತ್ರ ವ್ಯಾಪ್ತಿಗೊಳಪಡುವ ವಿಭಾಗದ ಎಲ್ಲಾ ಜಿಲ್ಲಾಧಿಕಾರಿಗಳನ್ನು, ಆಯುಕ್ತರು ಮಹಾನಗರ ಪಾಲಿಕೆ ಕಲಬುರಗಿ/ಬಳ್ಳಾರಿ, ಕಲಬುರಗಿ ವಿಭಾಗದ ಆಯಾ ಉಪ ವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ಸಹಾಯಕ ಆಯುಕ್ತರು, ವಿಭಾಗದ ಎಲ್ಲಾ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರನ್ನು ಸಹಾಯಕ ಮತದಾರರ ನೊಂದಣಾಧಿಕಾರಿಯನ್ನಾಗಿ ನೇಮಿಸಿರುತ್ತದೆ.
ಅರ್ಹತಾ ದಿನಾಂಕ 01.11.2023ಕ್ಕೆ ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯು ನೂತನವಾಗಿ ಸಿದ್ದಪಡಿಸುವ ಕಾರ್ಯವು ಈಗಾಗಲೇ ಪ್ರಾರಂಭವಾಗಿದೆ. ಕರ್ನಾಟಕ ಈಶಾನ್ಯ ಪದವೀಧರರ ಮತ ಕ್ಷೇತ್ರದ ಮತದಾರರ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳಲು ಈ ಕೆಳಗಿನಂತೆ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.

ವೇಳಾಪಟ್ಟಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಜಿ ನಮೂನೆ-18 ರಲ್ಲಿ ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕ ಮತ್ತು ದಿನ: 06.11.2023 (ಸೋಮವಾರ), ಕರಡು ಮತದಾರರ ಪಟ್ಟಿ ಪ್ರಕಟಣೆ ದಿನಾಂಕ ಮತ್ತು ದಿನ: 23.11.2023 (ಗುರುವಾರ), ಹಕ್ಕು ಮತ್ತು ಆಕ್ಷೇಪಣೆಗಳಿಗಾಗಿ ನಿಗದಿಪಡಿಸಿದ ಅವಧಿ: 23.11.2023 (ಗುರುವಾರ) ರಿಂದ 09.12.2023 (ಶನಿವಾರ), ಅಂತಿಮ ಮತದಾರರ ಪಟ್ಟಿ ಪ್ರಕಟಣೆ ದಿನಾಂಕ ಮತ್ತು ದಿನ: 30.12.2023 (ಶನಿವಾರ) ಆಗಿರುತ್ತದೆ.

ಮಾರ್ಗಸೂಚಿಗಳು

ಅರ್ಹತಾ ದಿನಾಂಕ 01.11.2023 ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 01.11.2020 ಕ್ಕಿಂತಲು ಹಿಂದೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು. ದಿನಾಂಕ 01.11.2020 ಕ್ಕಿಂತಲೂ ಮೊದಲು ಪದವಿ ಪಡೆದಿರುವಂತಹ ಪದವೀಧರರು ನಿಗದಿಪಡಿಸಿದ ನಮೂನೆ-18 ರಲ್ಲಿ (ಭಾವ ಚಿತ್ರದೊಂದಿಗೆ) ಭರ್ತಿಮಾಡಿದ ಅರ್ಜಿಯೊಂದಿಗೆ ಕಡ್ಡಾಯವಾಗಿ ತಾವು ಉತ್ತೀರ್ಣರಾಗಿರುವ ಅಂಕಪಟ್ಟಿ, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ತಾವು ವಾಸಿಸುತ್ತಿರುವ ವಾಸ್ಥಳದ ದಾಖಲೆಗಳನ್ನು ಸ್ವಯಂಧೃಡೀಕರಿಸಿ ಅಲ್ಲದೇ ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಅರ್ಜಿಯೊಂದಿಗೆ ದಿನಾಂಕ 06.11.2023ರ ಒಳಗಾಗಿ ಮತದಾರರ ನೊಂದಣಾಧಿಕಾರಿಗಳು/ಸಹಾಯಕ ಮತದಾರರ ನೋಂದಣಾಧಿಕಾರಿಗಳು/ಸಂಬಂಧಪಟ್ಟ ವಿಧಾನಸಭಾ ಮತಕೇತ್ರದ ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಾರ್ಯಾಲಯದಲ್ಲಿ (ಮಹಾನಗರ ಪಾಲಿಕೆ ಹಾಗೂ ತಹಶೀಲ್ದಾರರ ಕಾರ್ಯಾಲಯದಲ್ಲಿ) ಸಲ್ಲಿಸಬಹುದು.

ಸೇವೆಯಲ್ಲಿರುವ ಸರ್ಕಾರಿ ನೌಕರರು ತಮ್ಮ ಇಲಾಖಾ ಮುಖ್ಯಸ್ಥರ ಮೂಲಕ ಇಲಾಖಾ ಮುಖ್ಯಸ್ಥರು ತಮ್ಮ ಅಧೀನದಲ್ಲಿ ಬರುವ ಸರ್ಕಾರಿ ನೌಕರರ ಸೇವಾ ದಾಖಲೆಗಳನ್ನು ಪರಿಶೀಲಿಸಿ, ಆಯೋಗವು ನಿಗದಿಪಡಿಸಿರುವ 3ನೇ ಅನುಸೂಚಿತ ನಮೂನೆಯಲ್ಲಿ ದೃಢೀಕರಣ ಪತ್ರವನ್ನು ನೀಡಿ ತಮ್ಮ ಕಚೇರಿಯ ಎಲ್ಲಾ ಅರ್ಹ ಸಿಬ್ಬಂದಿಗಳ ಅರ್ಜಿಗಳನ್ನು ಒಟ್ಟಾಗಿ ಗೊತ್ತುಪಡಿಸಿದ ಅಧಿಕಾರಿಗೆ ದಿನಾಂಕ 06.11.2023ರ ಒಳಗಾಗಿ ನೀಡಬಹುದು.

ವಕೀಲರು, ವೈದ್ಯರು, ಚಾರ್ಟರ್ಡ ಅಕೌಂಟೆಂಟರು ಹಾಗೂ ನೊಂದಾಯಿತ ಇಂಜಿನಿಯರ್ ಸಂಘದ ಸದಸ್ಯರು ದೃಢೀಕರಿಸಿದ ಪಟ್ಟಿಯೊಡನೆ ಅರ್ಜಿಯನ್ನು ಒಟ್ಟಾಗಿ ಗೊತ್ತುಪಡಿಸಿದ ಅಧಿಕಾರಿಗೆ ಸಲ್ಲಿಸಬಹುದು. ಪ್ರಮಾಣ ಪತ್ರದೊದಡನೆ ಕ್ಷೇಮೆಂಟುದಾರನು ತಾನು ಓದಿದ ಕಾಲೇಜಿನ ಪ್ರಾಂಶುಪಾಲರು ಅಥವಾ ಸಂಬಂಧಪಟ್ಟ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ಗಳಿಂದ ಪ್ರಮಾಣ ಪತ್ರ ಪಡೆದು ಅರ್ಜಿ ಸಲ್ಲಿಸಬಹುದು.

ಫಾರಂ-18 ಈಗಾಗಲೇ ಎಲ್ಲಾ ಗೊತ್ತುಪಡಿಸಿದ ಅಧಿಕಾರಿಗಳಿಗೆ ಒದಗಿಸಲಾಗಿದೆ. ಫಾರಂ-18 ನ್ನು ಅರ್ಹ ಮತದಾರರು ಉಚಿತವಾಗಿ ಸಂಬಂಧಪಟ್ಟ ಕಚೇರಿಯಿಂದ ಪಡೆಯಬಹುದಾಗಿದೆ. ಅರ್ಹ ಪದವೀಧರರು ಸಂಬಂಧಪಟ್ಟ ಅಧಿಕಾರಿಗಳಿಗೆ ಚುನಾವಣಾ ಗುರುತಿನ ಚೀಟಿಯ ಎಪಿಕ್ ನಂಬರ್ ಮಾಹಿತಿಯನ್ನು ಒದಗಿಸಬೇಕು.
ಅರ್ಹ ಪದವೀಧರರು ಮೂಲ ಪದವಿ ಪ್ರಮಾಣ ಪತ್ರ ಮತ್ತು ಅದರ ಪ್ರತಿಯನ್ನು ಸ್ವಯಂ ಧೃಡೀಕರಿಸಿಕೊಂಡು, ಗೊತ್ತುಪಡಿಸಿದ ಅಧಿಕಾರಿಯ ಮುಂದೆ ಖುದ್ದು ಹಾಜರಾಗಿ ಅವರಿಂದ ದೃಢೀಕರಿಸಿಕೊಂಡು ಅವರಲ್ಲಿಯೇ ಅರ್ಜಿಯನ್ನು ಕಡ್ಡಾಯವಾಗಿ ನೀಡಬೇಕು. ಯಾವುದೇ ವ್ಯಕ್ತಿ ಅಂಚೆ ಮೂಲಕ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಗೊತ್ತುಪಡಿಸಿದ ಅಧಿಕಾರಿಗೆ ಸಲ್ಲಿಸಿದಲ್ಲಿ ಅಂತಹ ಅರ್ಜಿದಾರರಿಗೆ ಗೊತ್ತು ಪಡಿಸಿದ ಅಧಿಕಾರಿಯು ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡುತ್ತಾರೆ. ವಿಚಾರಣೆಗೆ ಹಾಜರಾಗದೇ ಅಥವಾ ದಾಖಲೆಗಳನ್ನು ಹಾಜರುಪಡಿಸದಿದ್ದಲ್ಲಿ ಅರ್ಜಿಗಳು ತಿರಸ್ಕತಗೊಳ್ಳುತ್ತವೆ. ಬಲ್ಕ (ಗುಚ್ಚಗಳಲ್ಲಿ) ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಆಯೋಗವು ಮುಂಬರುವ ದಿನಗಳಲ್ಲಿ ಸದರಿ ನಮೂನೆ-18 ರ ಅರ್ಜಿಗಳನ್ನು ಇಆರ್ಎಂಎಸ್ (ERMS) ನಲ್ಲಿ ಅಳವಡಿಸಲು ಉದ್ದೇಶಿಸಿರುತ್ತಾರೆ. ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತದ ಮತದಾರರ ಪಟ್ಟಿ ಸಿದ್ದಪಡಿಸಿಕೊಳ್ಳುವ ಕುರಿತು ಹಾಗೂ ಚುನಾವಣಾ ಪೂರ್ವ ತಯಾರಿ ಮಾಡಿಕೊಳ್ಳುವಂತೆ ವಿಭಾಗದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟವರಿಗೆ ಈ ಕಾರ್ಯಾಲಯದಿಂದ ನಿರ್ದೇಶನ ನೀಡಲಾಗಿದೆ.
ಕರ್ನಾಟಕ ಈಶಾನ್ಯ ಪದವೀಧರರ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಇದ್ದಲ್ಲಿ ಮತದಾರರ ನೊಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಮತ್ತು ಸಂಬಂಧಪಟ್ಟ ವಿಧಾನಸಭಾ ಮತಕ್ಷೇತ್ರದ ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಾರ್ಯಾಲಯದಲ್ಲಿ (ಮಹಾನಗರ ಪಾಲಿಕೆ ಹಾಗೂ ತಹಶೀಲ್ದಾರರ ಕಾರ್ಯಾಲಯದಲ್ಲಿ) ನಿಗದಿಪಡಿಸಿದ ಕಾಲಮಿತಿಯೊಳಗೆ ಸಲ್ಲಿಸತಕ್ಕದ್ದು.

ಅರ್ಹ ಪದವೀಧರರು ಹೆಚ್ಚಿನ ಆಸಕ್ತಿ ವಹಿಸಿ ಈ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು, ಸುಭದ್ರ ಹಾಗೂ ಪ್ರಜಾಪ್ರಭುತ್ರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಎಲ್ಲಾ ಅರ್ಹ ಮತದಾರರು ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular