ಬೆಂಗಳೂರು : ಸಿಲಿಕಾನ್ ಸಿಟಿಯ ಕುರುಬರಹಳ್ಳಿ ಇಳಿಜಾರು ರಸ್ತೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಗುಜರಿ ಗೋಡೌನ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ದುರದೃಷ್ಟವಶಾತ್, ಏರ್ಪೋರ್ಟ್ ಪಿಕ್ಅಪ್ಗಾಗಿ ಕಾಯುತ್ತಾ ಕಾರಿನಲ್ಲೇ ಮಲಗಿದ್ದ 22 ವರ್ಷದ ಯುವಕ ಅಂಬದಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗೂಗಲ್ ಮ್ಯಾಪ್ ನಂಬಿ ಬಂದ ಓವರ್ಲೋಡ್ ಸ್ಟೀಲ್ ಲಾರಿಯ ಚಾಲಕ ನಿಯಂತ್ರಣ ಕಳೆದುಕೊಂಡಿದ್ದೇ ಈ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ.
ಏನಿದು ಘಟನೆ
ಬೆಂಗಳೂರಿನ ಕುರುಬರಹಳ್ಳಿ (Kurubarahalli) ಬಳಿ ಕಬ್ಬಿಣದ ಕಂಬಿಗಳನ್ನು (Steel) ಹೊತ್ತು ಸಾಗುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸಮೀಪದ ಗುಜರಿ ಗೋಡೌನ್ (Scrap Godown) ಬೆಂಕಿಗಾಹುತಿಯಾಗಿದೆ.
ಕಾರಿನೊಳಗೆ ಮಲಗಿದ್ದ ಅಂಬದಾಸ್ (22) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತ ಏರ್ಪೋರ್ಟ್ ಪಿಕ್ಅಪ್ಗಾಗಿ ಕಾಯುತ್ತಿದ್ದ ಎಂದು ತಿಳಿದುಬಂದಿದೆ. ಲಾರಿ ಚಾಲಕ ಶರ್ಮಾಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದ ಕಾರಣ: ಆಂಧ್ರಪ್ರದೇಶದಿಂದ ಸುಂಕದಕಟ್ಟೆಗೆ ಸ್ಟೀಲ್ ಸಾಗಿಸುತ್ತಿದ್ದ ಲಾರಿ ಚಾಲಕ, ಗೂಗಲ್ ಮ್ಯಾಪ್ ಅನುಸರಿಸಿ ಕುರುಬರಹಳ್ಳಿಯ ಇಳಿಜಾರು ರಸ್ತೆಗೆ ಬಂದಿದ್ದಾನೆ. ಓವರ್ ಲೋಡ್ ಆಗಿದ್ದ ಲಾರಿ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ಲಾರಿ ಕಾರನ್ನು ಸುಮಾರು 50 ರಿಂದ 100 ಮೀಟರ್ ದೂರ ಎಳೆದೊಯ್ದು ಗುಜರಿ ಗೋಡೌನ್ಗೆ ಗುದ್ದಿದೆ. ಈ ವೇಳೆ ಗೋಡೌನ್ನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಲಾರಿ ಚಾಲಕ ರಾಜಕಾಲುವೆಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ.ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

