HomeKarnatakaGOOD NEWS: 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ: ರಂಗ ಶಿಕ್ಷಕರ ನೇಮಕ: 'ನೈತಿಕ...

GOOD NEWS: 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ: ರಂಗ ಶಿಕ್ಷಕರ ನೇಮಕ: ‘ನೈತಿಕ ವಿಜ್ಞಾನ’ ಈ ವರ್ಷದಿಂದಲೇ ಮರುಜಾರಿ

ಶಿವಮೊಗ್ಗ: ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಮಾನಸಿಕ ವಿಕಸನಕ್ಕಾಗಿ ರಂಗಶಿಕ್ಷಣವನ್ನು ಅಳವಡಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಇದರೊಂದಿಗೆ ದಶಕಗಳಿಂದ ಸ್ಥಗಿತಗೊಂಡಿದ್ದ ನೈತಿಕ ವಿಜ್ಞಾನ ವಿಷಯವನ್ನು ಈ ವರ್ಷದಿಂದಲೇ ಮರುಜಾರಿಗೊಳಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದರು.

ಶಿವಮೊಗ್ಗದ ರಂಗಾಯಣದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಪಿ. ಲಂಕೇಶ್ ಬಯಲು ರಂಗಮಂದಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ 25-30 ವರ್ಷಗಳಿಂದ ಶಾಲಾ ಪಠ್ಯದಲ್ಲಿ ಇಲ್ಲದ ‘ನೈತಿಕ ವಿಜ್ಞಾನ’ ವಿಷಯವನ್ನು 1 ರಿಂದ 10 ನೇ ತರಗತಿಯವರೆಗೆ ಈ ವರ್ಷದಿಂದಲೇ ಪರಿಚಯಿಸಲಾಗುತ್ತಿದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಇದರ ಮೂಲ ಉದ್ದೇಶವಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಂಸ್ಕೃತಿಕ ಕೆಪಿಎಸ್ ಶಾಲೆಗಳು:

ಮೈಸೂರಿನಲ್ಲಿ ಕಲೆ ಮತ್ತು ಸಂಸ್ಕೃತಿಗೆ ವಿಶೇಷ ಒತ್ತು ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ‘ಕಲೆ ಕರ್ನಾಟಕ ಪಬ್ಲಿಕ್ ಶಾಲೆ’ (KPS) ಆರಂಭಿಸಲು ಯೋಜನೆ ರೂಪಿಸಲಾಗಿದೆ. ಇಲ್ಲಿನ ಹಾಸ್ಟೆಲ್ ವ್ಯವಸ್ಥೆಯಡಿ ಪ್ರತಿಭಾವಂತ ಮಕ್ಕಳಿಗೆ ರಂಗಭೂಮಿ, ಸಂಗೀತ ಮತ್ತು ಜಾನಪದ ಕಲೆಗಳ ತರಬೇತಿ ನೀಡಲಾಗುವುದು ಎಂದರು.

ಶಿಕ್ಷಕರ ನೇಮಕಾತಿ:

ಇಲಾಖೆಯಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ರಂಗ ಶಿಕ್ಷಕರನ್ನು ಅತಿಥಿ ಶಿಕ್ಷಕರ ಮಾದರಿಯಲ್ಲಿ ನೇಮಿಸಿಕೊಳ್ಳುವ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

 ಇಂದಿನ ರೀಲ್ಸ್ ಮತ್ತು ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ಮಕ್ಕಳು ದಾರಿ ತಪ್ಪದಂತೆ ತಡೆಯಲು ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗಿದ್ದು ರಂಗ ಶಿಕ್ಷಣಕ್ಕೆ ಉತ್ತೇಜಿಸಿ ಅನುಷ್ಟಾನ ಮಾಡಬೇಕಾಗಿದೆ ಎಂದರು.

ಕುವೆಂಪು ಅವರ ಆಶಯದಂತೆ ಮಕ್ಕಳನ್ನು ‘ವಿಶ್ವಮಾನವ’ರನ್ನಾಗಿ ರೂಪಿಸಲು ಕಲೆ ಮತ್ತು ಸಾಹಿತ್ಯ ಪೂರಕವಾಗಿವೆ, ಈ ನಿಟ್ಟಿನಲ್ಲಿ ಶಾಲಾ ಹಂತದಿಂದಲೇ ಕಲೆ ಮತ್ತು ಸಂಸ್ಕೃತಿ, ರಂಗಾಸಕ್ತಿ ಮೂಡಿಸಲು ಶಿಕ್ಷಣ ಇಲಾಖೆ ಪರಿಣಾಮಕಾರಿಯಾಗಿ ಕ್ರಮ ವಹಿಸಲಿದೆ. ಶಾಲೆಗಳಲ್ಲಿ ಸಂಗೀತ, ಚಿತ್ರಕಲಾ ವಿಶೇಷ ಶಿಕ್ಷಕರ ನೇಮಕಾತಿಗೆ ಅವಕಾಶ ಇದೆ. ಆದರೂ ಸಹ ಮಕ್ಕಳಲ್ಲಿ ರಂಗಾಸಕ್ತಿ ಮೂಡಿಸಲು ತರಬೇತಿಗೆ ರಂಗಾಯಣದ ಸೇವೆ ಪಡೆಯಲಾಗುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ.ಮಂಜುನಾಥ್ ಸ್ವಾಮಿ ಬಿ.ಎಸ್ ಮಾತನಾಡಿ, ಯಾವುದೇ ನಾಡಿನ ನಿಜವಾದ ಶ್ರೀಮಂತಿಕೆ ಅಲ್ಲಿನ ಪ್ರಕೃತಿ ಮತ್ತು ಸಂಸ್ಕೃತಿಯಲ್ಲಿ ಅಡಗಿರುತ್ತದೆ. ಇಂತಹ ಸಂಸ್ಕೃತಿಯನ್ನು ಪೋಷಿಸಿ ಬೆಳೆಸುವಲ್ಲಿ ಶಿವಮೊಗ್ಗ ರಂಗಾಯಣದ ಕೊಡುಗೆ ಅಪಾರವಾಗಿದ್ದು, ನೂತನ ಪಿ.ಲಂಕೇಶ್ ಅವರ ಹೆಸರಿನ ಬಯಲು ರಂಗಮಂದಿರದಲ್ಲಿ ಇರುವ ಸೌಲಭ್ಯಗಳು ರಂಗಚಟುವಟಿಕೆಗಳಿಗೆ ಮತ್ತಷ್ಟು ಶಕ್ತಿ ತುಂಬಲಿವೆ.  ರಂಗಭೂಮಿಯು ಕೇವಲ ಮನರಂಜನೆಯಲ್ಲ, ಅದು ಸಮಾಜದಲ್ಲಿ ಭಾವೈಕ್ಯತೆಯನ್ನು ಮೂಡಿಸುವ ಪ್ರಬಲ ಮಾಧ್ಯಮವಾಗಿದೆ. ವಿಶೇಷವಾಗಿ ಯುವ ಪೀಳಿಗೆಗೆ ರಂಗಭೂಮಿಯ ಅರಿವು ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್ ಮತ್ತು ರೀಲ್ಸ್‌ಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಲೆಗಳಲ್ಲಿ ನಾಟಕ ಪ್ರದರ್ಶನಗಳ ಮೂಲಕ ಅವರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸಬೇಕು. ಕಲಾವಿದರ ಶ್ರಮ ಮತ್ತು ಕಲೆಗೆ ಗೌರವ ನೀಡುವ ವಾತಾವರಣ ನಿರ್ಮಾಣವಾಗಬೇಕು ಎಂದರು.

 ರಾಜ್ಯದ ಆರು ರಂಗಾಯಣಗಳಲ್ಲಿ ಶಿವಮೊಗ್ಗ ರಂಗಾಯಣವು ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ. ಮೈಸೂರು ರಂಗಾಯಣದ ಮಾದರಿಯಲ್ಲಿಯೇ ಶಿವಮೊಗ್ಗ ರಂಗಾಯಣವು ಜನರಿಗೆ ನಾಟಕಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗುತ್ತಿದೆ. ಸರ್ಕಾರವು ಸೌಲಭ್ಯಗಳನ್ನು ನೀಡಬಹುದು, ಆದರೆ ರಂಗಾಯಣದ ಯಶಸ್ಸು ಅಲ್ಲಿನ ಜನಪ್ರತಿನಿಧಿಗಳು, ಆಡಳಿತ ಮಂಡಳಿ ಮತ್ತು ಸಾರ್ವಜನಿಕರ ಸಕ್ರಿಯ ಸಹಭಾಗಿತ್ವದ ಮೇಲೆ ಅವಲಂಬಿತವಾಗಿದೆ. ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಾಂಸ್ಕೃತಿಕ ಕೇಂದ್ರಗಳು ಜೀವಂತವಾಗಿರಲು ಸಾಧ್ಯ ಎಂದರು.

ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿದರು. ಕಾರ್ಯಕ್ರಮದಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜಮೂರ್ತಿ, ರಂಗಾಯಣ ಮಾಜಿ ನಿರ್ದೇಶಕರಾದ ಸಂದೇಶ್ ಜವಳಿ, ಎಂ.ಗಣೇಶ್, ಇಕ್ಬಾಲ್ ಅಹ್ಮದ್, ಮಲ್ಲಿಕಾರ್ಜುನ ಕಡಕೋಳ, ಚಂದ್ರೇಗೌಡರು, ಕಾಂತೇಶ್ ಕದರಮಂಡಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ರಂಗಾಯಣದ ಆಡಳಿತಾಧಿಕಾರಿ ಡಾ.ಶೈಲಜಾ, ರಂಗ ಸಮಾಜದ ಸದಸ್ಯರು ಹಾಜರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular