ಬೆಂಗಳೂರು: ಮಹಾಶಿವರಾತ್ರಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಸಾರಿಗೆ ಸಂಸ್ಥೆ ಸಿಹಿ ಸುದ್ದಿ ನೀಡಿದೆ. ಶಿವರಾತ್ರಿ ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯ ಜನ ಊರಿಗೆ ತೆರಳುವ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ 2155 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.
ಹಬ್ಬಗಳ ರಜೆ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಜಂಟಿಯಾಗಿ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿವೆ.
ಇಂದಿನಿಂದ 895 ಹೆಚ್ಚುವರಿ ಬಸ್ ಗಳು ಸಂಚರಿಸಲಿವೆ. ಶನಿವಾರ 1180, ಭಾನುವಾರ 80 ಹೆಚ್ಚುವರಿ ಬಸ್ ಗಳನ್ನು ಬಿಡಲಾಗುವುದು. ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಿಂದ ಉತ್ತರ ಕರ್ನಾಟಕ, ಕರಾವಳಿ ಭಾಗಕ್ಕೆ ಬಸ್ ಗಳು ತೆರಳಲಿವೆ. ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಮಡಿಕೇರಿ, ತಮಿಳುನಾಡು ಕಡೆಗೆ ಬಸ್ ಗಳು ತೆರಳಿಲಿವೆ. ಕೆಎಸ್ಆರ್ಟಿಸಿ ಅಧಿಕೃತ ವೆಬ್ಸೈಟ್ ಅಥವಾ ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸಲು ಕೋರಲಾಗಿದೆ.
ಇನ್ನು ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಯಶವಂತಪುರ -ಕಲಬುರಗಿ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ವ್ಯವಸ್ಥೆ ಮಾಡಿದೆ. ಇಂದಿನಿಂದ ರಾತ್ರಿ 22:40ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 9:15ಕ್ಕೆ ಕಲಬುರಗಿ ತಲುಪಲಿದೆ ಬೆಳಗ್ಗೆ 10:15ಕ್ಕೆ ಕಲಬುರಗಿಯಿಂದ ಹೊರಟು ರಾತ್ರಿ 21:40ಕ್ಕೆ ಯಶವಂತಪುರ ತಲುಪಲಿದೆ.

