ಬೆಂಗಳೂರು: ರಾಜ್ಯದ ಕಾನ್ ಸ್ಟೆಬಲ್ ಗಳಿಂದ ಹಿಡಿದು ನಾನ್ ಐಪಿಎಸ್ ಎಸ್ಪಿ ದರ್ಜೆಯ ಅಧಿಕಾರಿಗಳಿಗೆ ಪತ್ರಾಂಕಿತ ರಜೆ ಸೌಲಭ್ಯ ಮಂಜೂರು ಮಾಡಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮುಂದಾಗಿದ್ದಾರೆ. ಇದಕ್ಕಾಗಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಹಬ್ಬದ ಸಂದರ್ಭಗಳಲ್ಲಿಯೂ ರಜೆ ಸಿಗದೆ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ಅಧಿಕಾರಿಗಳಿಗೆ ಶೀಘ್ರವೇ ವಾರ್ಷಿಕ 13 ತಿಂಗಳು ವೇತನ ದೊರೆಯುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆಯ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿ ಆರ್ಥಿಕ ನೆರವು ಒದಗಿಸಿದಲ್ಲಿ ಪೊಲೀಸ್ ಕಾನ್ಸ್ಟೇಬಲ್, ಪೊಲೀಸ್ ಇನ್ಸ್ಪೆಕ್ಟರ್, ಆರ್ಪಿಐ, ಡಿವೈಎಸ್ಪಿ, ಎಸ್ಪಿ ಹುದ್ದೆಯವರಿಗೆ 30 ದಿನಗಳ ಹೆಚ್ಚುವರಿ ವೇತನ ಸೌಲಭ್ಯ ಸೌಲಭ್ಯ ಸಿಗಲಿದೆ.
ಸರ್ಕಾರಿ ರಜಾ ದಿನಗಳಂದು ಕೆಲಸ ಮಾಡುವ ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್ ಗಳಿಗೆ ಮಾತ್ರ 30 ದಿನ ರಜೆ ಸೌಲಭ್ಯ ಇದೆ. ಎಎಸ್ಐ, ಪಿಎಸ್ಐ ಹುದ್ದೆಗೆ 15 ದಿನ ಪತ್ರಾಂಕಿತ ರಜೆ ನೀಡಲಾಗುತ್ತದೆ. ಎಎಸ್ಐ ಪಿಎಸ್ಐಗಳಿಗೆ ನೀಡುತ್ತಿರುವ ಹೆಚ್ಚುವರಿ ಅರ್ಧ ತಿಂಗಳ ವೇತನವನ್ನು 30 ದಿನಕ್ಕೆ ವಿಸ್ತರಿಸಲು ಮತ್ತು ಹೊಸದಾಗಿ ಇನ್ಸ್ಪೆಕ್ಟರ್ ಹುದ್ದೆಯಿಂದ ಎಸ್ಪಿ ಹುದ್ದೆಗೆ 30 ದಿನ ರಜಾ ಸೌಲಭ್ಯ ಕಲ್ಪಿಸಲು ಉನ್ನತ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.
ಈ ಸಭೆಯ ವರದಿಯನ್ನು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ. ಎಎಸ್ಐ ಮತ್ತು ಪಿಎಸ್ಐಗಳಿಗೆ ನೀಡುತ್ತಿರುವ 15 ದಿನಗಳ ರಜಾ ವೇತನವನ್ನು 30 ದಿನಕ್ಕೆ ಹೆಚ್ಚಿಸಲು 60.76 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಪಿಐಯಿಂದ ಎಸ್ಪಿ ವರೆಗೆ 30 ದಿನಗಳ ಪತ್ರಾಂಕಿತ ರಜೆ ಸೌಲಭ್ಯಕ್ಕೆ ಅಂದಾಜು 28.55 ಕೋಟಿ ರೂ. ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

