ಬೆಂಗಳೂರು: ಸಂಕಷ್ಟದಲ್ಲಿರುವ ಹಿರಿಯ ನಾಗರಿಕರ ನೆರವಿಗೆ ರಾಜ್ಯ ಪೊಲೀಸ್ ಇಲಾಖೆ ರೂಪಿಸಿದ ನೂತನ ಆಸರೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಚಾಲನೆ ನೀಡಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯ ಮನೆ ಮನೆಗೆ ಪೊಲೀಸ್ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ರಾಜ್ಯ ಪೊಲೀಸ್ ಇಲಾಖೆ ನೊಂದಿರುವ ಹಿರಿಯ ನಾಗರಿಕರಿಗೆ ಆಸರೆಯಾಗಲು ಮುಂದಾಗಿದೆ. ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕ ದಂಪತಿ ಮತ್ತು ಏಕಾಂಗಿಯಾಗಿರುವ ಹಿರಿಯ ನಾಗರಿಕರ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು.
ನಂತರ ವೃದ್ಧರ ಸಂಕಷ್ಟಗಳಿಗೆ ಸ್ಪಂದನೆ, ಸಮಯೋಚಿತ ನೆರವು ಒದಗಿಸಲಾಗುವುದು. ಹಿರಿಯ ನಾಗರಿಕರೊಂದಿಗೆ ಪೊಲೀಸರು ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಅವರ ಮೇಲೆ ಅಪರಾಧ ಮತ್ತು ದೌರ್ಜನ್ಯಗಳು ನಡೆಯದಂತೆ ನಿಗಾ ವಹಿಸಲಾಗುವುದು.
ಹಿರಿಯ ನಾಗರಿಕರ ದೈಹಿಕ, ಭಾವನಾತ್ಮಕ, ಡಿಜಿಟಲ್ ಮತ್ತು ಆರ್ಥಿಕ ಸುರಕ್ಷತೆಗೆ ಹೆಚ್ಚಿನ ಗಮನಹರಿಸಲಾಗುವುದು. ಪ್ರತಿ ಪೊಲೀಸ್ ಠಾಣಾ ಮಟ್ಟದಲ್ಲಿ ಸಮುದಾಯ ಪೊಲೀಸ್ ಅಧಿಕಾರಿ ನೇಮಿಸಲಾಗುವುದು. ಹಿರಿಯ ನಾಗರಿಕರ ಮನೆಗಳಿಗೆ ವಾರಕ್ಕೆ ಒಮ್ಮೆಯಾದರೂ ಸಿಪಿಓಗಳು ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಬೇಕು ಎಂದು ಡಿಜಿಪಿ ಡಾ. ಸಲಿಂ ತಿಳಿಸಿದ್ದಾರೆ.

