ನವದೆಹಲಿ: ಸಾರ್ವಜನಿಕ ಪಡಿತರ ವ್ಯವಸ್ಥೆಯ ಅಕ್ಕಿಯಲ್ಲಿ ನುಚ್ಚಕ್ಕಿಯ ಪ್ರಮಾಣವನ್ನು ಶೇ. 25 ರಿಂದ ಶೇಕಡ 10ಕ್ಕೆ ಕಡಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಈ ಬಗ್ಗೆ ಮಾಹಿತಿ ನೀಡಿದ್ದು, ಪಡಿತರ ವ್ಯವಸ್ಥೆಯ ಅಕ್ಕಿಯಲ್ಲಿ ನುಚ್ಚಕ್ಕಿ ಪ್ರಮಾಣ ಕಡಿತಗೊಳಿಸುವ ಮೂಲಕ ವಾರ್ಷಿಕ ಸುಮಾರು 90 ಲಕ್ಷ ಟನ್ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ಮುಕ್ತಗೊಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ.
ಈ ಕ್ರಮದಿಂದ ಪಡಿತರ ಫಲಾನುಭವಿಗಳಿಗೆ ಗುಣಮಟ್ಟದ ಅಕ್ಕಿ ಸಿಗುತ್ತದೆ. ಎಥೆನಾಲ್ ಉದ್ಯಮಕ್ಕೆ ವರ್ಷವಿಡಿ ಸ್ಥಿರವಾಗಿ ಕಚ್ಚಾವಸ್ತು ಪೂರೈಕೆಯಾಗುತ್ತದೆ ಎಂದು ಹೇಳಿದ್ದಾರೆ.
ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಇಂಧನ ಆಮದು ಅವಲಂಬನೆ ಕಡಿಮೆ ಮಾಡಲು ಎಥೆನಾಲ್ ಮಿಶ್ರಣ ಯೋಜನೆ ವೇಗಗೊಳಿಸುವುದು ಅಗತ್ಯವಾಗಿದೆ. ಮುಂದಿನ ವರ್ಷದಿಂದ ಡಿಸ್ಟಿಲರಿಗಳಿಗೆ ಎಫ್‌ಸಿಐ ಅಕ್ಕಿ ಪೂರೈಕೆ ಸ್ಥಗಿತವಾಗಲಿದೆ. ಅದರ ಬದಲಿಗೆ ನುಚ್ಚಕ್ಕಿ ಮತ್ತು ಮೆಕ್ಕೆಜೋಳಕ್ಕೆ ಆದ್ಯತೆ ನೀಡಲಿದ್ದು, ಈಗಾಗಲೇ ಐದು ರಾಜ್ಯಗಳಲ್ಲಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

