ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(KPSC) ವತಿಯಿಂದ 384 ಕೆಎಎಸ್ ಹುದ್ದೆಗಳ ಭರ್ತಿಗೆ ಮುಖ್ಯ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ.
1:3 ಅರ್ಹತೆ ಆಧಾರದಲ್ಲಿ ಸಂದರ್ಶನಕ್ಕೆ ಅರ್ಹರಾದ 1,152 ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ ಸೋಮವಾರ ಪ್ರಕಟಿಸಿದೆ. ಈ ಮೂಲಕ ಮುಖ್ಯ ಪರೀಕ್ಷೆ ನಡೆಸಿ 10 ತಿಂಗಳ ನಂತರ ಅಭ್ಯರ್ಥಿಗಳಿಗೆ ಶುಭ ಸುದ್ದಿ ಸಿಕ್ಕಿದೆ.
2023- 24ನೇ ಸಾಲಿನ ಒಟ್ಟು 384 ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ನೇಮಕಾ ನಿಯಮಗಳು 1997 ಮತ್ತು ಕಾಲಕಾಲಕ್ಕೆ ತಿದ್ದುಪಡಿ ಆದ ನಿಯಮ ಹಾಗೂ ಚಾಲ್ತಿಯಲ್ಲಿರುವ ಮೀಸಲು ನಿಯಮಗಳ ಅನ್ವಯ ಮುಖ್ಯ ಪರೀಕ್ಷೆಯಿಂದ ವ್ಯಕ್ತಿತ್ವ ಪರೀಕ್ಷೆಗೆ 1:3 ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ.
ಸಂದರ್ಶನಕ್ಕೆ ಅರ್ಹರಾದ 1152 ಅಭ್ಯರ್ಥಿಗಳ ಪೈಕಿ 930 ಮಂದಿ ಜನರಲ್ ಕೇಡರ್, 222 ಅಭ್ಯರ್ಥಿಗಳು 56 ಹೈದರಾಬಾದ್ ಕರ್ನಾಟಕ ಕೇಡರ್ ಗೆ ಅರ್ಹತೆ ಪಡೆದಿದ್ದಾರೆ.
2024ರ ಫೆಬ್ರವರಿ 26ರಂದು 384 ಕೆಎಎಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆಗಸ್ಟ್ ನಲ್ಲಿ ನಡೆದ ಪ್ರಾಥಮಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ ಅನುವಾದದಲ್ಲಿ ಭಾರಿ ಲೋಪವಾಗಿದ್ದರಿಂದ ಪ್ರೊಬೇಷನರಿ ಪರೀಕ್ಷೆ ರದ್ದು ಮಾಡಿ ಹೊಸದಾಗಿ ಪರೀಕ್ಷೆ ನಡೆಸಲು ಸರ್ಕಾರ ಸೂಚಿಸಿದ್ದು, 2024ರ ಡಿಸೆಂಬರ್ 29ರಂದು ಮರು ಪರೀಕ್ಷೆ ನಡೆಸಲಾಗಿದ್ದು, ಆ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಅನುವಾದದಲ್ಲಿಯೂ ಎಡವಟ್ಟುಗಳಾಗಿದ್ದವು. ಕೆಎಟಿ ಮರು ಪರೀಕ್ಷೆಗೆ ನಿರಾಕರಿಸಿತ್ತು.
ನಂತರ 384 ಹುದ್ದೆಗಳಿಗೆ 1:15 ಅನುಪಾತದಲ್ಲಿ 5760 ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿತ್ತು. ಹಲವು ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿ ಕೊನೆ ಕ್ಷಣದಲ್ಲಿ ಪರೀಕ್ಷೆ ಬರೆಯಲು ಅನುಮತಿ ಪಡೆದಿದ್ದರು. 2025 ರ ಮೇ 3, 5, 7 ಮತ್ತು 9ರಂದು ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಈಗ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟಿಸಿ 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆ ಮಾಡಲಾಗಿದೆ. ಈ ಪ್ರಕ್ರಿಯೆ ಆರಂಭವಾಗಿ ಮೂರು ವರ್ಷಗಳೇ ಕಳೆದಿದ್ದು ಸಂದರ್ಶನ ದಿನಾಂಕ ನಿಗದಿಯಾಗಿ, ಅಂತಿಮ ಆಯ್ಕೆ ಪಟ್ಟಿ ಯಾವಾಗ ಪ್ರಕಟವಾಗಲಿದೆಯೋ ಎಂಬುದನ್ನು ಕಾದುನೋಡಬೇಕಿದೆ.

