ಬೆಂಗಳೂರು: ರಾಜ್ಯದಿಂದ ಜಮ್ಮು -ಕಾಶ್ಮೀರದ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಯಾತ್ರೆ ಕೈಗೊಳ್ಳುವ ಭಕ್ತರಿಗೆ ಸರ್ಕಾರದಿಂದ 5,000 ರೂ. ಅನುದಾನ ಸಹಾಯಧನ ನೀಡಲಿದ್ದು, ಇದಕ್ಕಾಗಿ ಬಜೆಟ್ ನಲ್ಲಿ ಐದು ಕೋಟಿ ಅನುದಾನ ಘೋಷಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್ ನಲ್ಲಿ ವೈಷ್ಣೋದೇವಿ ಯಾತ್ರಿಕರಿಗೆ 5,000 ರೂ. ಸಹಾಯಧನ ಘೋಷಿಸಿದ್ದಾರೆ. ಈಗಾಗಲೇ ಮಾನಸ ಸರೋವರ, ಚಾರ್ ಧಾಮ್, ಕಾಶಿ ಸೇರಿದಂತೆ ಕೆಲವು ಯಾತ್ರೆಗಳಿಗೆ ಮುಜರಾಯಿ ಇಲಾಖೆ ಸಹಾಯಧನ ನೀಡುತ್ತಿದೆ. ಈಗ ವೈಷ್ಣೋದೇವಿ ಯಾತ್ರಿಕರಿಗೆ ಸಹಾಯಧನ ಘೋಷಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ ದೇವಾಲಯಗಳಿಗೆ ಮೂಲಸೌಕರ್ಯ, ಅಭಿವೃದ್ಧಿ ಕೈಗೊಳ್ಳಲು ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಲು ಉದ್ದೇಶಿಸಲಾಗಿದೆ. ಹೊರರಾಜ್ಯದ ಪುಣ್ಯಕ್ಷೇತ್ರಗಳಲ್ಲಿ ಕನ್ನಡಿಗರ ವಾಸ್ತವ್ಯಕ್ಕಾಗಿ ಛತ್ರಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ.
ವಾರಣಾಸಿಯಲ್ಲಿ ಹೊಸ ಛತ್ರ ನಿರ್ಮಾಣ ಮಾಡಲಾಗುವುದು. ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿ ಮಠಕ್ಕೆ ಸೇರಿದ ಜಾಗದಲ್ಲಿರುವ ಛತ್ರದ ನವೀಕರಣ, ಶ್ರೀಶೈಲಂ ಕ್ಷೇತ್ರದಲ್ಲಿ ಹೊಸದಾಗಿ ಯಾತ್ರಿ ನಿವಾಸ, ಮಹಾರಾಷ್ಟ್ರದ ತುಳಜಾಪುರದಲ್ಲಿ ನೂತನ ಛತ್ರ ನಿರ್ಮಿಸಲು ಸರ್ಕಾರ ಕ್ರಮ ಕೈಗೊಂಡಿದೆ.

