ಬೆಂಗಳೂರು: ಮೆಟ್ರೋ ಪ್ರಯಾಣ ದರ ಏರಿಕೆ ಆತಂಕದಲ್ಲಿದ್ದ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪ್ರತಿವರ್ಷ ಶೇಕಡ 5ರಷ್ಟು ಪ್ರಯಾಣ ದರವನ್ನು ಬಿಎಂಆರ್ಸಿಎಲ್ ಹೆಚ್ಚಳ ಮಾಡಬಹುದು ಎಂದು ದರ ನಿಗದಿ ಸಮಿತಿ ಶಿಫಾರಸು ಮಾಡಿದ್ದರೂ ಸದ್ಯಕ್ಕೆ ಮೆಟ್ರೋ ಪ್ರಯಾಣದರ ಏರಿಸುವ ಚಿಂತನೆ ಇಲ್ಲವೆಂದು ಬಿಎಂಆರ್ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಇಂಧನ ವ್ಯತ್ಯಾಸ, ಸಿಬ್ಬಂದಿ ವೆಚ್ಚ, ನಿರ್ವಹಣೆ ವೆಚ್ಚ ಸೇರಿದಂತೆ ಇತರ ವೆಚ್ಚಗಳನ್ನು ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿ ಎಷ್ಟು ಹೆಚ್ಚಾಗಿದೆ ಎನ್ನುವುದನ್ನು ಲೆಕ್ಕಾಚಾರ ಹಾಕಿ ಅದರ ಸರಾಸರಿಯಂತೆ ಪ್ರಯಾಣ ದರ ಹೆಚ್ಚಿಸಬೇಕು. ಇಲ್ಲವೇ ವಾರ್ಷಿಕ ಶೇಕಡ 5ರಷ್ಟು ಹೆಚ್ಚಳ ಮಾಡಬೇಕು. ಈ ಎರಡರಲ್ಲಿ ಯಾವುದು ಕಡಿಮೆಯೋ ಅದನ್ನು ಪಾಲಿಸಬೇಕು ಎಂದು ದರ ನಿಗದಿ ಸಮಿತಿ ವರದಿಯಲ್ಲಿ ತಿಳಿಸಿದೆ.
ಆದರೆ, ದರ ಏರಿಕೆಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆಯನ್ನು ಬಿಎಂಆರ್ಸಿಎಲ್ ಆರಂಭಿಸಿಲ್ಲ. ಸದ್ಯಕ್ಕೆ ದರ ಏರಿಕೆ ಮಾಡುವುದಿಲ್ಲ. ಮುಂದೆ ಏರಿಕೆ ಬಗ್ಗೆ ನಿರ್ಧರಿಸಿದಾಗ ಮಾಹಿತಿ ನೀಡುವುದಾಗಿ ಬಿಎಂಆರ್ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

