ಬೆಂಗಳೂರು: ನಮ್ಮ ಮೆಟ್ರೋ ಪಿಂಕ್ ಲೈನ್ ಎಲಿವೇಟೆಡ್ ಮಾರ್ಗದಲ್ಲಿ ರೈಲು ಸೇವೆ ಆರಂಭಿಸಲು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಅಧಿಕಾರಿಗಳಿಂದ ಪರಿಶೀಲನಾ ಕಾರ್ಯ ನಡೆದಿದೆ. ನಗರದಲ್ಲಿ ಸದ್ಯ 96.10 ಕಿ.ಮೀ ಉದ್ದದ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸೇವೆ ನೀಡಲಾಗಿದೆ. ಕಾಳೇನ ಅಗ್ರಹಾರದಿಂದ ನಾಗವಾರವರೆಗಿನ 21.26 ಕಿಲೋಮೀಟರ್ ಉದ್ದದ ಪಿಂಕ್ ಲೈನ್ ನಲ್ಲಿ ಈಗಾಗಲೇ ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ 7.5 ಕಿಲೋಮೀಟರ್ ಉದ್ದದ ಎಲಿವೇಟೆಡ್ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಈ 7.5 ಕಿಲೋಮೀಟರ್ ಉದ್ದದ ಮಾರ್ಗ ಪರೀಕ್ಷಾ ಕಾರ್ಯಗಳು ನಡೆಯುತ್ತಿವೆ.
ಮೇ ತಿಂಗಳ ಅಂತ್ಯದೊಳಗೆ ಮೆಟ್ರೋ ರೈಲು ಕಾರ್ಯಾಚರಣೆ ನಡೆಸಲು ಬಿಎಂಆರ್‌ಸಿಎಲ್ ಗುರಿ ಹೊಂದಿದ್ದು ಈಗಾಗಲೇ ನಾಲ್ಕು ಬಾರಿ ರೈಲುಗಳ ಮೂಲಕ ಪರೀಕ್ಷಾ ಕಾರ್ಯ ಕೈಗೊಳ್ಳಲಾಗಿದೆ. ರೈಲಿನ ವೇಗ, ಲೋಡ್ ಟೆಸ್ಟ್, ಟ್ರ್ಯಾಕ್ ಟೆಸ್ಟ್, ಸ್ಟೇಷನ್ ತಪಾಸಣೆ, ಪವರ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಏಪ್ರಿಲ್ 5ರವರೆಗೆ ಈ ಪರೀಕ್ಷೆಗಳು ನಡೆಯಲಿವೆ.
ಮೇ ತಿಂಗಳಲ್ಲಿ ಉದ್ಘಾಟನೆಯಾಗಲಿರುವ 7.5 ಕಿಮೀ ಉದ್ದದ ಮಾರ್ಗದಲ್ಲಿ ಒಟ್ಟು ಆರು ನಿಲ್ದಾಣಗಳು ಬರಲಿವೆ. ಈ ಮಾರ್ಗದಲ್ಲಿ ಒಟ್ಟು 23 ರೈಲುಗಳ ಮೂಲಕ ಸೇವೆ ನೀಡಲಾಗುವುದು. ಅದರಲ್ಲಿ ಆರು ರೈಲುಗಳು ಚಾಲಕ ರಹಿತ ರೈಲುಗಳಾಗಿರುತ್ತವೆ.

