ಬೆಂಗಳೂರು : ಬೆಂಗಳೂರಿನಲ್ಲಿ ಇ-ಖಾತಾ ಪಡೆಯಲು ಅಲೆದಾಡುತ್ತಿದ್ದ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ನಗರದ ಸುಮಾರು 25 ಲಕ್ಷ ಆಸ್ತಿಗಳನ್ನು ಡಿಜಿಟಲ್ ವ್ಯಾಪ್ತಿಗೆ ತರುವ ಉದ್ದೇಶದಿಂದ ಮೇ 16ರಿಂದ ಪ್ರತಿ ಶನಿವಾರ ಬೃಹತ್ ‘ಇ-ಖಾತಾ ಮೇಳ’ವನ್ನು ಆಯೋಜಿಸಲಾಗಿದೆ.
ಮಧ್ಯವರ್ತಿಗಳ ಕಾಟವಿಲ್ಲದೆ, ಪಾರದರ್ಶಕವಾಗಿ ಇ-ಖಾತಾ ವಿತರಿಸಲು ಜಿಬಿಎ (GBA) ವ್ಯಾಪ್ತಿಯ 50ಕ್ಕೂ ಹೆಚ್ಚು ಕಡೆಗಳಲ್ಲಿ ಈ ಮೇಳ ನಡೆಯಲಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಿ ತಮ್ಮ ಆಸ್ತಿ ದಾಖಲೆಗಳನ್ನು ಸುಲಭವಾಗಿ ಡಿಜಿಟಲೀಕರಣಗೊಳಿಸಿಕೊಳ್ಳಬಹುದಾಗಿದೆ. ಇ-ಖಾತಾ ಪಡೆಯಲು ತೊಂದರೆ ಅನುಭವಿಸುತ್ತಿರುವವರಿಗೆ ಮನೆ ಬಾಗಿಲಿಗೆ ಸೇವೆ ತಲುಪಿಸುವುದು ಮತ್ತು ಸುಮಾರು 25 ಲಕ್ಷ ಆಸ್ತಿಗಳನ್ನು ಇ-ಖಾತಾ ವ್ಯಾಪ್ತಿಗೆ ತರುವುದು ಇದರ ಉದ್ದೇಶವಾಗಿದೆ.ಮೇ 16ರಿಂದ ಆರಂಭವಾಗಿ, ಪ್ರತಿ ಶನಿವಾರ ಈ ಮೇಳವನ್ನು ನಡೆಸಲಾಗುತ್ತದೆ.
ಜಿಬಿಎ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ 50 ಕಡೆಗಳಲ್ಲಿ ಈ ಮೇಳ ನಡೆಯಲಿದೆ.ಸಾರ್ವಜನಿಕರು ಮಧ್ಯವರ್ತಿಗಳ ಹಾವಳಿ ಇಲ್ಲದೆ, ಲಂಚ ನೀಡುವ ಅಗತ್ಯವಿಲ್ಲದೆ ನೇರವಾಗಿ ತಮ್ಮ ಇ-ಖಾತಾವನ್ನು ಪಡೆಯಬಹುದು. ಈಗಾಗಲೇ ಸುಮಾರು 10 ಲಕ್ಷ ಇ-ಖಾತಾಗಳನ್ನು ವಿತರಿಸಲಾಗಿದೆ.
ಅಗತ್ಯವಿರುವ ದಾಖಲೆಗಳು: ಅರ್ಜಿ ಸಲ್ಲಿಸಲು ಸಾರ್ವಜನಿಕರು ಈ ಕೆಳಗಿನ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಬೇಕು:
- ಸೇಲ್ ಡೀಡ್ ಅಥವಾ ಟೈಟಲ್ ಡೀಡ್
- ಪ್ರಾಪರ್ಟಿ ಟ್ಯಾಕ್ಸ್ ರಸೀದಿ (SAS ಪ್ರಾಪರ್ಟಿ ಟ್ಯಾಕ್ಸ್ ಐಡಿ)
- ಆಧಾರ್ ಕಾರ್ಡ್ (ಇ-ಕೆವೈಸಿ ಮಾಡಿದ್ದರೆ ಉತ್ತಮ)
- ಇಸಿ (EC)
- ಬೆಸ್ಕಾಂ ಬಿಲ್
- ಆಸ್ತಿಯ ಜಿಪಿಎಸ್ ಲೊಕೇಶನ್ (GPS Location)

