HomeLatest Newsಕ್ರೀಡಾಪಟುಗಳಿಗೆ ಗುಡ್ ನ್ಯೂಸ್: ಒಲಿಂಪಿಕ್ಸ್ ತರಬೇತಿಗೆ ತಲಾ 10 ಲಕ್ಷ ರೂ. ಸಹಾಯಧನ: ಸಿಎಂ ಸಿದ್ಧರಾಮಯ್ಯ...

ಕ್ರೀಡಾಪಟುಗಳಿಗೆ ಗುಡ್ ನ್ಯೂಸ್: ಒಲಿಂಪಿಕ್ಸ್ ತರಬೇತಿಗೆ ತಲಾ 10 ಲಕ್ಷ ರೂ. ಸಹಾಯಧನ: ಸಿಎಂ ಸಿದ್ಧರಾಮಯ್ಯ ಘೋಷಣೆ

ಮೈಸೂರು: ಮುಂದಿನ ಒಲಿಂಪಿಕ್ಸ್ ‌ಗೆ ತರಬೇತಿ ಪಡೆಯಲು ರಾಜ್ಯದ 60 ಅತ್ಯಂತ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ವಾರ್ಷಿಕ ತಲಾ ರೂ 10 ಲಕ್ಷ ಸಹಾಯಧನ ನೀಡಿ ತರಬೇತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಇಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ “ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಸರಾ ಕ್ರೀಡಾಕೂಟದಲ್ಲಿ ಒಂದು ವಿಭಾಗದಿಂದ 720 ಕ್ರೀಡಾಪಟುಗಳಂತೆ 5 ವಿಭಾಗಗಳಿಂದ ಒಟ್ಟು 3,600 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಶುಭಹಾರೈಕೆಗಳು. ಸೋಲು – ಗೆಲುವುಗಳಿಗಿಂತ ಕ್ರೀಡಾಮನೋಭಾವ ಮುಖ್ಯ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಚಾಮುಂಡಿವಿಹಾರ ಕ್ರೀಡಾಂಗಣದ ಗ್ಯಾಲರಿ ಹಾಗೂ ಈಜುಕೊಳಗಳಿಗೆ ಅತ್ಯಾಧುನಿಕ ಟೆನ್ಸೈಲ್ ಮೆಂಬ್ರೇನ್ ಛಾವಣಿ ಅಳವಡಿಸುವ ಮತ್ತು ಫುಟ್ಬಾಲ್ ಅಂಕಣ ನಿರ್ಮಿಸುವ ಕಾಮಗಾರಿಯನ್ನು  ರೂ. 20.78 ಕೋಟಿ ವೆಚ್ಚದಲ್ಲಿ ನಾವು ಕೈಗೊಂಡಿದ್ದೇವೆ ಎಂದರು.

ಸಮಾರಂಭದಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಭಾಗವಹಿಸಿರುವುದು ವಿಶೇಷ. ಕುಸ್ತಿ ಕೇವಲ ಪುರುಷರ ಕ್ರೀಡೆ ಎಂದು ಪರಿಗಣಿಸಲಾಗಿದ್ದ  ಕಾಲದಲ್ಲಿ ಸಾಮಾಜಿಕ ಅಡೆತಡೆಗಳು ಮತ್ತು ಹಿನ್ನಡೆಗಳನ್ನು ಅನುಭವಿಸಿದರೂ ಇವರು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿದ್ದಾರೆ. ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ, ಭಾರತದ ಕೀರ್ತಿ ಮೆರೆದ ವಿನೇಶ್ ಅವರು ಹರಿಯಾಣ ರಾಜ್ಯದಲ್ಲಿ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು.

ಸರ್ಕಾರ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದೆ. ಮುಂದಿನ ಒಲಿಂಪಿಕ್ಸ್ ‌ಗೆ ತರಬೇತಿ ಪಡೆಯಲು ರಾಜ್ಯದ 60 ಅತ್ಯಂತ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ವಾರ್ಷಿಕ ತಲಾ ರೂ 10 ಲಕ್ಷ ಸಹಾಯಧನ ನೀಡಿ ತರಬೇತಿ ನೀಡಲಾಗುವುದು. ಅಲ್ಲದೇ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕವಿಜೇತ ಕ್ರೀಡಾಪಟುಗಳಿಗೆ ಸರ್ಕಾರ 6 ಕೋಟಿ ರೂ.ಗಳ ನಗದು ಬಹುಮಾನವನ್ನೂ ನೀಡಲಿದೆ. ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಒದಗಿಸಲು ಎಲ್ಲ ಇಲಾಖೆಗಳಲ್ಲಿ ಶೇ.2 ರಷ್ಟು ಮೀಸಲಾತಿಯನ್ನೂ, ಹಾಗೂ ಪೊಲೀಸ್ ಇಲಾಖೆಯಲ್ಲಿ 2 ರಿಂದ ಶೇ.3 ರಷ್ಟು ಕ್ರೀಡಾಮೀಸಲಾತಿಯನ್ನು ನೀಡಲಾಗುತ್ತಿದೆ ಎಂದರು.

ಇಂದಿನ ಯುವಜನತೆ ಶಿಕ್ಷಣ ಹಾಗೂ ಕ್ರೀಡೆಗೆ ಹೆಚ್ಚು ಒತ್ತು ನೀಡಿದರೆ ಅವರ ದೈಹಿಕ ಹಾಗೂ ಮಾನಸಿಕ ವಿಕಸನಕ್ಕೆ ಸಹಕಾರಿಯಾಗಲಿದೆ. ಸದೃಢ ಆರೋಗ್ಯಕ್ಕೆ ಕ್ರೀಡೆ ಹಾಗೂ ವ್ಯಾಯಾಮ ಅತ್ಯಗತ್ಯ ಎಂದರು.

ಈ ಸಂದರ್ಭದಲ್ಲಿ ಸಚಿವ ಕೆ. ವೆಂಕಟೇಶ್, ಶಾಸಕ ತನ್ವೀರ್ ಸೇಟ್, ವಿನೇಶ್ ಫೋಗಟ್ ಮೊದಲಾದವರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular