ಕೃತಕ ಬುದ್ಧಿಮತ್ತೆ (ಎಐ) ಕೋರ್ಸ್‌ಗಳನ್ನು ಬಹು ಜನರಿಗೆ ತಲುಪಿಸುವತ್ತ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಐಐಟಿ ಮದ್ರಾಸ್ ನೇತೃತ್ವದ ಡಿಜಿಟಲ್ ಲರ್ನಿಂಗ್ ಪ್ಲಾಟ್ ಫಾರ್ಮ್ ‘ಸ್ವಯಂ ಪ್ಲಸ್’ ತನ್ನ ಪ್ರಮುಖ ಎಐ ಫಾರ್ ಆಲ್ ಉಪಕ್ರಮದ ಭಾಗವಾಗಿ ಹಿಂದಿ ಆವೃತ್ತಿಯನ್ನು ಪ್ರಾರಂಭಿಸಿದೆ.
ಇದು ದೇಶಾದ್ಯಂತ ಎಐ ಕಲಿಯುವವರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ. ಎಐ ಕೋರ್ಸ್ ಕಲಿಕೆಗೆ ಇದ್ದ ಭಾಷೆಯ ಅಡೆತಡೆಗಳನ್ನು ತೆಗೆದುಹಾಕುವ ಮೂಲಕ ಎಐ ಕಲಿಕೆಯನ್ನು ಇನ್ನಷ್ಟು ಸುಲಭಗೊಳಿಸಲು ಹಿಂದಿ ಕೋರ್ಸ್‌ಗಳನ್ನು ಆರಂಭಿಸಲಾಗಿದೆ.
ಈ ಕೋರ್ಸ್‌ಗಳನ್ನು ಕಲಿಯಲು ಯಾವುದೇ ಎಐ ಅಥವಾ ಕೋಡಿಂಗ್ ಕುರಿತು ಪೂರ್ವ ಮಾಹಿತಿ ಅಗತ್ಯವಿಲ್ಲ. ಒಟ್ಟು 6 ಉಚಿತ ಆನ್‌ಲೈನ್ ಕೋರ್ಸ್‌ಗಳು ಇದರಲ್ಲಿದೆ. ಎಐ ಕಲಿಯುವವರಿಗೆ ಕೇವಲ ಬೇಸಿಕ್ ಡಿಜಿಟಲ್ ಜ್ಞಾನ ಮತ್ತು ಕಲಿಕೆಯಲ್ಲಿ ಆಸಕ್ತಿ ಇದ್ದರೆ ಸಾಕು.
ವಿವಿಧ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ದುಡಿಯುವ ವೃತ್ತಿಪರರಿಗೆ ಈ ಕೋರ್ಸ್‌ಗಳು ಸೂಕ್ತವಾಗಿರುತ್ತವೆ. ಎಲ್ಲಾ ಆರು ಕೋರ್ಸ್‌ಗಳನ್ನು ಐಐಟಿ ಮದ್ರಾಸ್ ಪರಿಸರ ವ್ಯವಸ್ಥೆಯ ತಜ್ಞರು ತಯಾರು ಮಾಡಿದ್ದು, ಪ್ರಾಯೋಗಿಕವಾದ ಕಲಿಕೆಯನ್ನು ಇದು ಒಳಗೊಂಡಿದೆ.
ಹೇಗಿರಲಿದೆ ಪಠ್ಯಕ್ರಮ: 6 ಎಐ ಕೋರ್ಸ್‌ಗಳ ಪಠ್ಯಕ್ರಮವು ಉದ್ಯೋಗಾರ್ಹತೆಗೆ ಬಲವಾದ ಒತ್ತು ನೀಡುವಂತಹ ಚಟುವಟಿಕೆಗಳು, ನೈಜ ದತ್ತಾಂಶಗಳು ಮತ್ತು ಕೇಸ್ ಸ್ಟಡಿಗಳನ್ನು ಒಳಗೊಂಡಿದೆ. ಕೋರ್ಸ್‌ಗಳಿಗೆ ನೋಂದಣಿ ಆಗಲು ಜನವರಿ 26 ಕೊನೆಯ ದಿನವಾಗಿದೆ.
ಸ್ವಯಂ ಪ್ಲಸ್ ಎಂಬುದು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಐಐಟಿ ಮದ್ರಾಸ್ ಸ್ಥಾಪನೆ ಮಾಡಿರುವ ಒಂದು ಕಲಿಕಾ ವೇದಿಕೆಯಾಗಿದೆ. ಉದ್ಯೋಗ ಆಧಾರಿತ ಆನ್‌ಲೈನ್ ಶಿಕ್ಷಣವನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸಲು ಇದನ್ನು ತಯಾರಿಸಲಾಗಿದೆ. ಈ ವೇದಿಕೆಯು ಪ್ರಸ್ತುತ ಎಂಜಿನಿಯರಿಂಗ್, ಬ್ಯಾಂಕಿಂಗ್ ಮತ್ತು ಹಣಕಾಸು, ಆತಿಥ್ಯ ಮತ್ತು ಐಟಿ ಸೇರಿದಂತೆ 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ 500ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಆಯೋಜಿಸುತ್ತದೆ.
ಅಧಿಕೃತ ಮಾಹಿತಿಯ ಪ್ರಕಾರ ಇದು 4.75 ಲಕ್ಷಕ್ಕೂ ಹೆಚ್ಚು ನೋಂದಾಯಿತ ವಿದ್ಯಾರ್ಥಿಗಳನ್ನು ಹೊಂದಿದೆ. ಭಾರತದಾದ್ಯಂತದ ವಿದ್ಯಾರ್ಥಿಗಳಿದ್ದಾರೆ. ಐಐಟಿ ಮದ್ರಾಸ್‌ನ ಡೀನ್ (ಯೋಜನೆ) ಪ್ರೊಫೆಸರ್ ಆರ್.ಸಾರಥಿ ಮಾತನಾಡಿ, “ಹಿಂದಿ ಕೋರ್ಸ್‌ಗಳ ಪ್ರಾರಂಭವು ಹಲವು ಜನರನ್ನು ತಲುಪಲು ಸಹಾಯ ಮಾಡುತ್ತದೆ. ಹಿಂದಿ ಆವೃತ್ತಿಗಳೊಂದಿಗೆ ಎಲ್ಲಾ 6 ಎಐ ಕೋರ್ಸ್‌ಗಳು ಈಗ ಕಲೆ, ವಿಜ್ಞಾನ, ವಾಣಿಜ್ಯ ಮತ್ತು ಸಂಬಂಧಿತ ವಿಭಾಗಗಳ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಇದ್ದ ಭಾಷೆಯ ಅಡೆತಡೆಗಳನ್ನು ತೆಗೆದುಹಾಕಿದೆ” ಎಂದು ಹೇಳಿದ್ದಾರೆ.
“ಹೆಚ್ಚಿನ ವಿದ್ಯಾರ್ಥಿಗಳು ಎಐ ಶಿಕ್ಷಣದಲ್ಲಿ ಭಾಗವಹಿಸುವಿಕೆಯನ್ನು ವಿಸ್ತರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಕೋರ್ಸ್ 25 ರಿಂದ 45 ಗಂಟೆಗಳವರೆಗೆ ನಡೆಯುತ್ತದೆ ಮತ್ತು ಎಲ್ಲರಿಗೂ ಪ್ರವೇಶ ಉಚಿತವಾಗಿದೆ. ಯಾರು ಬೇಕಾದರೂ ಆನ್‌ಲೈನ್‌ನಲ್ಲಿ ಕೋರ್ಸ್ ಕಲಿತು ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು” ಎಂದು ತಿಳಿಸಿದರು.
ಹಿಂದಿಯಲ್ಲಿ ನೀಡಲಾಗುವ 6 ಕೋರ್ಸ್‌ಗಳಲ್ಲಿ ಶಿಕ್ಷಣ ತಜ್ಞರಿಗೆ ಕೃತಕ ಬುದ್ಧಿಮತ್ತೆ, ಭೌತಶಾಸ್ತ್ರದಲ್ಲಿ ಕೃತಕ ಬುದ್ಧಿಮತ್ತೆ, ರಸಾಯನಶಾಸ್ತ್ರದಲ್ಲಿ ಕೃತಕ ಬುದ್ಧಿಮತ್ತೆ, ಲೆಕ್ಕಶಾಸ್ತ್ರದಲ್ಲಿ ಕೃತಕ ಬುದ್ಧಿಮತ್ತೆ, ಕೃತಕ ಬುದ್ಧಿಮತ್ತೆಯೊಂದಿಗೆ ಕ್ರಿಕೆಟ್ ವಿಶ್ಲೇಷಣೆ ಮತ್ತು ಪೈಥಾನ್ ಬಳಸುವ ಕೃತಕ ಬುದ್ಧಿಮತ್ತೆ/ ಎಂಎಲ್ ಸೇರಿವೆ.
2025ರ ಮೇ ತಿಂಗಳಲ್ಲಿ ಐಐಟಿ ಮದ್ರಾಸ್ ಪ್ರವರ್ತಕ್ ಸಹಯೋಗದೊಂದಿಗೆ ಮೊದಲು ಎಐ ಕೋರ್ಸ್‌ಗಳನ್ನು ಪ್ರಾರಂಭಿಸಿತು. ಮೊದಲ ಬ್ಯಾಚ್‌ನಲ್ಲಿ 42,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 2ನೇ ಬ್ಯಾಚ್‌ನಲ್ಲಿ 50,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು.

