ಬೆಂಗಳೂರು: ವಾರಾಂತ್ಯದಲ್ಲಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ (Gold Rate) ಗ್ರಾಹಕರಿಗೆ ಸೋಮವಾರವೂ ಸಮಾಧಾನ ತಂದಿದೆ. ಜೂನ್ 1 ರ ಇಂದಿನ ಮಾರುಕಟ್ಟೆ ವಹಿವಾಟಿನಲ್ಲಿ ಬಂಗಾರದ ದರವು ಪ್ರತಿ ಗ್ರಾಮ್‌ಗೆ 75 ರೂಪಾಯಿಗಳಷ್ಟು ತಗ್ಗಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕುಸಿತದ ಹಾದಿಯಲ್ಲೇ ಮುಂದುವರಿದಿದೆ. ಮತ್ತೊಂದೆಡೆ, ಬೆಳ್ಳಿ ಬೆಲೆ ಮಾತ್ರ ಕಳೆದ ಎರಡು ವಾರಗಳಿಂದ ಯಾವುದೇ ದೊಡ್ಡ ಏರಿಳಿತವಿಲ್ಲದೆ ಅತ್ಯಂತ ಸ್ಥಿರವಾಗಿದೆ.
ಇಂದಿನ ಚಿನ್ನದ ದರ ವಿವರ (10 ಗ್ರಾಮ್‌ಗೆ):
22 ಕ್ಯಾರಟ್ ಆಭರಣ ಚಿನ್ನ: ₹1,43,200 ರುಪಾಯಿ
24 ಕ್ಯಾರಟ್ ಅಪರಂಜಿ ಚಿನ್ನ: ₹1,56,220 ರುಪಾಯಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದರ ಹೇಗಿದೆ?
ಬೆಂಗಳೂರು ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಇಳಿಕೆಯಾಗಿದ್ದು, 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ ₹1,43,200 ಆಗಿದೆ. ಇನ್ನು ಬೆಳ್ಳಿ ಬೆಲೆ 100 ಗ್ರಾಮ್‌ಗೆ ₹28,000 ಮುಂದುವರಿದಿದೆ. ನೆರೆರಾಜ್ಯಗಳಾದ ತಮಿಳುನಾಡು ಮತ್ತು ಕೇರಳದ ಕೆಲವೆಡೆ 100 ಗ್ರಾಮ್ ಬೆಳ್ಳಿ ಬೆಲೆ ₹29,000 ವರೆಗೆ ಇದೆ.
ಬೆಳ್ಳಿ ದರ ಸ್ಥಿರ, ಯಥಾಸ್ಥಿತಿ ಕಾಯ್ದುಕೊಂಡ ಶ್ವೇತ ಲೋಹ
ಚಿನ್ನದ ದರ ಸತತವಾಗಿ ಇಳಿಕೆಯಾಗುತ್ತಿದ್ದರೂ, ಬೆಳ್ಳಿ ದರ ಮಾತ್ರ ಯಾವುದೇ ಬದಲಾವಣೆ ಕಾಣದೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಕಳೆದ 3 ಪ್ರಮುಖ ವಹಿವಾಟು ಅವಧಿಗಳಿಂದಲೂ ಬೆಳ್ಳಿ ಬೆಲೆ ಸ್ಥಿರವಾಗಿದ್ದು, ಬೆಂಗಳೂರು ಮತ್ತು ಹೈದರಾಬಾದ್ ಮಾರುಕಟ್ಟೆಯಲ್ಲಿ ಪ್ರಸ್ತುತ 1 ಕೆಜಿ ಬೆಳ್ಳಿ ದರ ₹2,80,000 ಮಾರ್ಕ್‌ನಲ್ಲಿ ಮುಂದುವರಿದಿದೆ.
ಜಾಗತಿಕ ಮಾರುಕಟ್ಟೆಯ ಪರಿಸ್ಥಿತಿ (Global Market Trends):
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ಇಳಿಕೆಯ ಹಾದಿಯಲ್ಲಿದೆ. ಜಾಗತಿಕವಾಗಿ ಸ್ಪಾಟ್ ಗೋಲ್ಡ್ (Spot Gold) ದರವು ಪ್ರತಿ ಔನ್ಸ್‌ಗೆ (Ounce) 6.78 ಡಾಲರ್‌ಗಳಷ್ಟು ಕುಸಿದಿದ್ದು, 4,516 ಡಾಲರ್ ತಲುಪಿದೆ. ಮತ್ತೊಂದೆಡೆ, ಸ್ಪಾಟ್ ಸಿಲ್ವರ್ (Spot Silver) ದರದಲ್ಲಿ ಶೇ. 0.85 ರಷ್ಟು ಅಲ್ಪ ಏರಿಕೆ ಕಂಡುಬಂದಿದ್ದು, ಪ್ರತಿ ಔನ್ಸ್ ಬೆಳ್ಳಿ 75.52 ಡಾಲರ್ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಹೂಡಿಕೆದಾರರು ಜಾಗತಿಕ ಆರ್ಥಿಕ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದರಿಂದ ಸದ್ಯ ಮಾರುಕಟ್ಟೆಯಲ್ಲಿ ಈ ರೀತಿಯ ಏರಿಳಿತಗಳು ಕಂಡುಬರುತ್ತಿವೆ.

