ಕಳೆದ ನಾಲ್ಕು ದಿನಗಳಿಂದ ರಾಕೆಟ್ ವೇಗದಲ್ಲಿ ಜಿಗಿಯುತ್ತಿದ್ದ ಚಿನ್ನದ ಬೆಲೆ ಏರಿಕೆಗೆ ಇಂದು ಮಂಗಳವಾರ ಕೊನೆಗೂ ಬ್ರೇಕ್ ಬಿದ್ದಿದೆ. ಸತತ ಏರಿಕೆಯಿಂದ ಕಂಗಾಲಾಗಿದ್ದ ಆಭರಣ ಪ್ರಿಯರಿಗೆ ಇಂದು ದರದಲ್ಲಿ ಸಣ್ಣ ಪ್ರಮಾಣದ ಇಳಿಕೆಯಾಗಿರುವುದು ಕೊಂಚ ರಿಲೀಫ್ ನೀಡಿದೆ.
ಶ್ರಾವಣ ಮಾಸ, ಸಾಲು ಸಾಲು ಹಬ್ಬಗಳು ಹಾಗೂ ಮದುವೆ ಸೀಸನ್ ಆರಂಭವಾಗುತ್ತಿರುವ ಬೆನ್ನಲ್ಲೇ ಕಳೆದ 4 ವಹಿವಾಟು ದಿನಗಳಲ್ಲಿ 10 ಗ್ರಾಂ ಚಿನ್ನದ ದರ ಬರೋಬ್ಬರಿ ₹9,000 ದಷ್ಟು ಹೆಚ್ಚಳವಾಗಿ ದಾಖಲೆಯ ಗರಿಷ್ಠ ಮಟ್ಟದ ಸಮೀಪಕ್ಕೆ ತಲುಪಿತ್ತು. ಆದರೆ, ಇಂದು ಆಗಸ್ಟ್ 25ರ ಮಂಗಳವಾರದಂದು 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲಿ ₹220 ಹಾಗೂ ಆಭರಣ ಚಿನ್ನದ ಬೆಲೆಯಲ್ಲಿ ₹200 ರಷ್ಟು ಇಳಿಕೆಯಾಗಿದೆ.
ಇಂದಿನ ಚಿನ್ನ ಮತ್ತು ಬೆಳ್ಳಿ ದರ ವಿವರ (ಆಗಸ್ಟ್ 25):
ಬೆಂಗಳೂರು ಹಾಗೂ ಪ್ರಮುಖ ನಗರಗಳಲ್ಲಿ:
24 ಕ್ಯಾರಟ್ ಚಿನ್ನ (10 ಗ್ರಾಂ): ₹1,63,750 (1 ಗ್ರಾಂಗೆ: ₹16,375 | ₹22 ಇಳಿಕೆ)
22 ಕ್ಯಾರಟ್ ಚಿನ್ನ (10 ಗ್ರಾಂ): ₹1,50,100 (1 ಗ್ರಾಂಗೆ: ₹15,010 | ₹20 ಇಳಿಕೆ)
ಬೆಳ್ಳಿ ದರ (1 ಕೆಜಿ): ₹2,60,000 (100 ಗ್ರಾಂಗೆ: ₹26,000 | 1 ಗ್ರಾಂಗೆ: ₹260)
(ಗಮನಿಸಿ: ನೆರೆಯ ತಮಿಳುನಾಡು ಹಾಗೂ ಕೇರಳದಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ ₹26,500 ರಷ್ಟಿದೆ.)
ದರ ಏರಿಳಿತಕ್ಕೆ ಕಾರಣವೇನು?
ಆಭರಣ ಚಿನ್ನದ ದರ ಸಲ್ಪ ತಗ್ಗಿದ್ದರೂ, ಬೆಳ್ಳಿ ಬೆಲೆಯಲ್ಲಿ ಕಳೆದ 5 ದಿನಗಳಿಂದ ಯಾವುದೇ ಬದಲಾವಣೆಯಾಗದೆ ಸ್ಥಿರತೆ ಕಾಯ್ದುಕೊಂಡಿದೆ. ಪ್ರಸ್ತುತ ಜಾಗತಿಕ ಮಟ್ಟದ ರಾಜಕೀಯ ಉದ್ವಿಗ್ನತೆ, ಅಮೆರಿಕದ ಸಾಲದ ಅಂಕಿ-ಅಂಶಗಳು ಹಾಗೂ ಯುಎಸ್ ಡಾಲರ್ ಮೌಲ್ಯದಲ್ಲಾಗುತ್ತಿರುವ ವ್ಯತ್ಯಾಸಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ದರದ ಮೇಲೆ ಪ್ರಭಾವ ಬೀರುತ್ತಿದ್ದು, ದೇಶೀಯ ಮಾರುಕಟ್ಟೆಯಲ್ಲೂ ದರಗಳ ತೀವ್ರ ಏರಿಳಿತಕ್ಕೆ ಕಾರಣವಾಗಿವೆ.

