ಹಬ್ಬಗಳು ಹಾಗೂ ಮದುವೆ ಸೀಸನ್ ಆರಂಭವಾಗುತ್ತಿದ್ದಂತೆ ಚಿನ್ನದ ಆಭರಣಗಳ ಖರೀದಿ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಆಭರಣದ ಶುದ್ಧತೆ ಮತ್ತು ಹಾಲ್ಮಾರ್ಕಿಂಗ್ ಬಗ್ಗೆ ಗ್ರಾಹಕರು ತಿಳಿದುಕೊಳ್ಳುವುದು ಮುಖ್ಯ. ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ಆಭರಣಗಳ ಹಾಲ್ಮಾರ್ಕಿಂಗ್ ವ್ಯವಸ್ಥೆಯನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನಿರ್ವಹಿಸುತ್ತದೆ.
ಹಾಲ್ಮಾರ್ಕ್ ಎಂದರೇನು?
ಹಾಲ್ಮಾರ್ಕ್ ಎಂದರೆ ಆಭರಣದಲ್ಲಿರುವ ಅಮೂಲ್ಯ ಲೋಹದ ಶುದ್ಧತೆಯನ್ನು ಅಧಿಕೃತವಾಗಿ ದೃಢಪಡಿಸುವ ಗುರುತು. ಚಿನ್ನದ ಆಭರಣದಲ್ಲಿ BIS ಲೋಗೋ, ಶುದ್ಧತೆಯ ಗುರುತು ಮತ್ತು ಆರು ಅಂಕಿಗಳ HUID (Hallmark Unique Identification) ಸಂಖ್ಯೆ ಇರುತ್ತದೆ. HUID ಸಂಖ್ಯೆಯನ್ನು BIS Care ಆ್ಯಪ್ನ ‘Verify HUID’ ಆಯ್ಕೆಯ ಮೂಲಕ ಪರಿಶೀಲಿಸಬಹುದು.
ಹೊಸ ನಿಯಮದ ಪ್ರಕಾರ, ಚಿನ್ನದ ಪ್ರತಿ ಆಭರಣಕ್ಕೆ ಹಾಲ್ಮಾರ್ಕಿಂಗ್ ಶುಲ್ಕವನ್ನು ₹45ರಿಂದ ₹75ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಪ್ರತಿ ಆಭರಣಕ್ಕೆ ₹30 ಹೆಚ್ಚಳವಾಗಿದ್ದು, ಇದು ಸುಮಾರು ಶೇ.67ರಷ್ಟು ಏರಿಕೆಯಾಗಿದೆ. ಬೆಳ್ಳಿಯ ಆಭರಣಗಳ ಹಾಲ್ಮಾರ್ಕಿಂಗ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಪ್ರತಿ ಬೆಳ್ಳಿ ಆಭರಣಕ್ಕೆ ₹35 ಶುಲ್ಕ ಮುಂದುವರಿಯಲಿದೆ.BIS (Hallmarking) Amendment Regulations, 2026ರ ಅಧಿಸೂಚನೆಯ ಪ್ರಕಾರ, ಈ ಪರಿಷ್ಕೃತ ಶುಲ್ಕ ಸೆಪ್ಟೆಂಬರ್ 14, 2026ರಿಂದ ಜಾರಿಗೆ ಬಂದಿದೆ.
ಹೊಸ ನಿಯಮದಂತೆ ಚಿನ್ನದ ಪ್ರತಿ ಆಭರಣಕ್ಕೆ ₹75 ಶುಲ್ಕವಿದ್ದು, ಒಂದು ಸರಕಿನಲ್ಲಿ ಎಷ್ಟು ಆಭರಣಗಳಿವೆ ಎಂಬುದರ ಆಧಾರದ ಮೇಲೆ ಒಟ್ಟು ಶುಲ್ಕ ಲೆಕ್ಕವಾಗುತ್ತದೆ. ಆದರೆ ಪ್ರತಿ ಸರಕಿಗೆ ಕನಿಷ್ಠ ₹200 ಶುಲ್ಕ ಅನ್ವಯಿಸುತ್ತದೆ.
ಈ ಹಿಂದೆ ಚಿನ್ನದ ಪ್ರತಿ ಆಭರಣಕ್ಕೆ ₹45 ಶುಲ್ಕವಿತ್ತು. ಕನಿಷ್ಠ ಸರಕು ಶುಲ್ಕ ₹200 ಆಗಿಯೇ ಇತ್ತು.ಬೆಳ್ಳಿ ಆಭರಣಕ್ಕೆ ಪ್ರತಿ ಆಭರಣಕ್ಕೆ ₹35 ಶುಲ್ಕ ಮುಂದುವರಿದಿದ್ದು, ಪ್ರತಿ ಸರಕಿಗೆ ಕನಿಷ್ಠ ₹150 ಶುಲ್ಕ ನಿಗದಿಯಾಗಿದೆ.
ಹಾಲ್ಮಾರ್ಕಿಂಗ್ ಶುಲ್ಕ ಎಂದರೇನು?
ಆಭರಣದ ಶುದ್ಧತೆಯನ್ನು ಪರೀಕ್ಷಿಸಿ ಹಾಲ್ಮಾರ್ಕ್ ಹಾಕುವ ಪ್ರಕ್ರಿಯೆಗೆ ವಿಧಿಸುವ ಶುಲ್ಕವೇ ಹಾಲ್ಮಾರ್ಕಿಂಗ್ ಶುಲ್ಕ. ಈ ಶುಲ್ಕ ಆಭರಣದ ತೂಕದ ಆಧಾರದ ಮೇಲೆ ಅಲ್ಲ; ಪ್ರತಿ ಆಭರಣದ (ಪ್ರತಿ ಪೀಸ್) ಆಧಾರದ ಮೇಲೆ ವಿಧಿಸಲಾಗುತ್ತದೆ. BIS ಮಾಹಿತಿಯ ಪ್ರಕಾರ ಹಾಲ್ಮಾರ್ಕಿಂಗ್ ಶುಲ್ಕವು ಮೇಕಿಂಗ್ ಚಾರ್ಜ್ ಅಥವಾ ವೇಸ್ಟೇಜ್ ಚಾರ್ಜ್ಗೆ ಸೇರಿರುವುದಿಲ್ಲ.
ಆಭರಣದ ಬೆಲೆ ಇದರಿಂದ ಹೆಚ್ಚಾಗುತ್ತದೆಯೇ?
ಹಾಲ್ಮಾರ್ಕಿಂಗ್ ಶುಲ್ಕವು ಆಭರಣದ ಒಟ್ಟು ಬೆಲೆಯಲ್ಲಿ ಒಂದು ಸಣ್ಣ ಅಂಶ ಮಾತ್ರ. ಸಾಮಾನ್ಯವಾಗಿ ಚಿನ್ನದ ಆಭರಣದ ಬೆಲೆ ಮುಖ್ಯವಾಗಿ ಆ ದಿನದ ಚಿನ್ನದ ದರ, ಆಭರಣದ ತೂಕ, ಮೇಕಿಂಗ್ ಚಾರ್ಜ್ ಮತ್ತು ಅನ್ವಯವಾಗುವ ತೆರಿಗೆಗಳ ಮೇಲೆ ಅವಲಂಬಿತವಾಗಿರುತ್ತದೆ.BIS ನಿಯಮಗಳ ಪ್ರಕಾರ ಹಾಲ್ಮಾರ್ಕಿಂಗ್ ಶುಲ್ಕವನ್ನು ಬಿಲ್ನಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು.
ಚಿನ್ನ ಖರೀದಿಸುವಾಗ ಏನು ಪರಿಶೀಲಿಸಬೇಕು?
ಚಿನ್ನದ ಆಭರಣ ಖರೀದಿಸುವಾಗ ಈ ಅಂಶಗಳನ್ನು ತಪ್ಪದೇ ಪರಿಶೀಲಿಸಿ:
BIS ಲೋಗೋ ಇದೆಯೇ ನೋಡಿ.
ಆಭರಣದ ಕ್ಯಾರೆಟ್ ಮತ್ತು ಫೈನ್ಸ್ನೆಸ್ ಪರಿಶೀಲಿಸಿ.
ಆರು ಅಂಕಿಗಳ HUID ಸಂಖ್ಯೆ ಇದೆಯೇ ನೋಡಿ.
BIS Care ಆ್ಯಪ್ನಲ್ಲಿ HUID ಸಂಖ್ಯೆಯನ್ನು ಪರಿಶೀಲಿಸಿ.
ಆಭರಣದ ವಿವರ, ತೂಕ, ಶುದ್ಧತೆ ಮತ್ತು ಹಾಲ್ಮಾರ್ಕಿಂಗ್ ಶುಲ್ಕ ಇರುವ ಅಧಿಕೃತ ಬಿಲ್ ಪಡೆದುಕೊಳ್ಳಿ.
ಚಿನ್ನದ ಹಾಲ್ಮಾರ್ಕ್ನಲ್ಲಿ ಯಾವ ಶುದ್ಧತೆ ಇರುತ್ತದೆ?
BIS ಪ್ರಕಾರ ಚಿನ್ನದ ಆಭರಣಗಳಿಗೆ 14K (585), 18K (750), 20K (833), 22K (916), 23K (958) ಮತ್ತು 24KS (995) ಸೇರಿದಂತೆ ವಿವಿಧ ಶುದ್ಧತೆಯ ಗ್ರೇಡ್ಗಳಿಗೆ ಹಾಲ್ಮಾರ್ಕಿಂಗ್ ವ್ಯವಸ್ಥೆ ಇದೆ.

