ಸೀಲ್ ಮಾಡಿದ ಬೋಬಾ ಡ್ರಿಂಕ್ ಬಾಟಲಿಯಲ್ಲಿದ್ದ ಗ್ಲಾಸ್ ಚೂರೊಂದನ್ನು ಐಸ್‌ಕ್ಯೂಬ್ ಎಂದು ತಪ್ಪಾಗಿ ಸೇವಿಸಿದ ಬಾಲಕಿಯೊಬ್ಬಳು ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆತಂಕ ಮೂಡಿಸಿದೆ.
ಏಪ್ರಿಲ್ 27ರಂದು ಈ ಘಟನೆ ನಡೆದಿದೆ. ಬಾಲಕಿಯ ತಾಯಿ ಜಾನ್ಹವಿ ಸಂಘ್ವಿ ಅವರು ಥೊರೈಪಕ್ಕಂನಲ್ಲಿರುವ ‘ಫ್ರೋಜನ್ ಬಾಟಲ್’ ಮಳಿಗೆಯಿಂದ ಬೋಬಾ ಟೀ ಖರೀದಿಸಿದ್ದರು. ಬಾಟಲ್ ಸೀಲ್ ಆಗಿದ್ದರೂ, ಅದರಲ್ಲಿ ಗಾಜಿನ ಚೂರುಗಳಿದ್ದವು ಎಂದು ಸಂಘ್ವಿ ಲಿಂಕ್ಡ್‌ಇನ್‌ನಲ್ಲಿ ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.
ಅವರ ಮಗಳು ಆಕಸ್ಮಿಕವಾಗಿ ಒಂದು ಗ್ಲಾಸ್ ಚೂರನ್ನು ಐಸ್ ಎಂದು ಬಾಯಿಗೆ ಹಾಕಿಕೊಂಡಿದ್ದಾಳೆ. ಆದರೆ, ಕೂಡಲೇ ಅದು ಗ್ಲಾಸ್ ಎಂದು ಅರಿತು ಉಗುಳಿದ್ದಾಳೆ. ತಕ್ಷಣವೇ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಾರನೆಯ ದಿನ ಬಾಲಕಿ ವಾಂತಿ ಮಾಡಲು ಪ್ರಾರಂಭಿಸಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಿಸಬೇಕಾಯಿತು ಎಂದು ಸಂಘ್ವಿ ತಿಳಿಸಿದ್ದಾರೆ.
ಕಂಪನಿಯ ನಿರ್ಲಕ್ಷ್ಯದ ಪ್ರತಿಕ್ರಿಯೆ: ಸಂಘ್ವಿ ಅವರು ‘ಫ್ರೋಜನ್ ಬಾಟಲ್’ ಕಂಪನಿಯನ್ನು ಸಂಪರ್ಕಿಸಿದಾಗ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಿಪುಲ್ ಚೌಧರಿ ಅವರು ಆಸ್ಪತ್ರೆ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದರು. ಅಗತ್ಯವಿರುವ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿದರೂ, 20 ದಿನ ಕಳೆದರೂ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಮತ್ತು ತಮ್ಮ ಕರೆಗಳು, ಇಮೇಲ್‌ಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಸಂಘ್ವಿ ಆರೋಪಿಸಿದ್ದಾರೆ.
ಈ ವಿಷಯದ ಗಂಭೀರತೆಯನ್ನು ಎತ್ತಿ ಹಿಡಿದಾಗ, ಕಂಪನಿಯು “ನಾವು ತಿಂಗಳಿಗೆ 2.5 ಕೋಟಿಗೂ ಹೆಚ್ಚು ಬಾಟಲಿಗಳನ್ನು ತಯಾರಿಸುತ್ತೇವೆ – ಇಂತಹ ಒಂದು ಪ್ರಕರಣ ನಮ್ಮ ಬ್ರ್ಯಾಂಡ್‌ಗೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಪ್ರತಿಕ್ರಿಯಿಸಿರುವುದು ಇನ್ನಷ್ಟು ಆಘಾತಕಾರಿಯಾಗಿದೆ. ಕಂಪನಿಯ ಈ ಪ್ರತಿಕ್ರಿಯೆಯನ್ನು ಸಂಘ್ವಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯ ವರ್ತನೆ ಎಂದು ಬಣ್ಣಿಸಿದ್ದು, ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
“ಈ ಪೋಸ್ಟ್ ಕೇವಲ ನನ್ನ ಕುಟುಂಬದ ಬಗ್ಗೆ ಅಲ್ಲ – ಇದು ಎಲ್ಲಾ ಗ್ರಾಹಕರಿಗೆ ಎಚ್ಚರಿಕೆಯ ಕರೆ ಮತ್ತು ಆಹಾರ ಮತ್ತು ಪಾನೀಯ ಉದ್ಯಮದಲ್ಲಿ ಕಟ್ಟುನಿಟ್ಟಾದ ಗುಣಮಟ್ಟ ನಿಯಂತ್ರಣ, ಕಾರ್ಪೊರೇಟ್ ಹೊಣೆಗಾರಿಕೆ ಮತ್ತು ನೈತಿಕ ಗ್ರಾಹಕ ಸೇವೆಯ ಅಗತ್ಯಕ್ಕೆ ಮನವಿ” ಎಂದು ಅವರು ಹೇಳಿದ್ದಾರೆ. ‘ಫ್ರೋಜನ್ ಬಾಟಲ್’ ಗ್ರಾಹಕರ ಸುರಕ್ಷತೆಗೆ ಬದ್ಧತೆ ತೋರಿಸುವವರೆಗೂ ಅವರ ಉತ್ಪನ್ನಗಳನ್ನು ಖರೀದಿಸದಂತೆ ಅವರು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಸಂಸ್ಥಾಪಕ ಪ್ರಾಂಶುಲ್ ಯಾದವ್ ಮತ್ತು ಸಿಇಒ ಅರುಣ್‌ಕುಮಾರ್ ಬಾಲಸುಬ್ರಮಣಿಯನ್ ಅವರು ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸುವಂತೆ ಒತ್ತಾಯಿಸಿದ್ದಾರೆ.
ಸಂಘ್ವಿ ಅವರ ಪೋಸ್ಟ್ ತಕ್ಷಣವೇ ವೈರಲ್ ಆಗಿದ್ದು, ಅನೇಕರು ಅವರಿಗೆ ಬೆಂಬಲ ವ್ಯಕ್ತಪಡಿಸಿ ‘ಫ್ರೋಜನ್ ಬಾಟಲ್’ ಅನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.