ಕರ್ನಾಟಕ ಸರ್ಕಾರ ಬೆಂಗಳೂರು ನಗರದ ಜನರಿಗೆ ದೊಡ್ಡ ಕೊಡುಗೆ ನೀಡಿದೆ. ನಗರದ 4 ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ದರದಲ್ಲಿ ಜನರಿಗೆ ಪ್ರಾಯೋಗಿಕವಾಗಿ ಚಿಕಿತ್ಸೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟಿಪ್ಪಣಿಯೊಂದನ್ನು ಮಂಡಿಸಿತ್ತು.
GBA ವ್ಯಾಪ್ತಿಯೊಳಗಿನ 4 ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ Ab-Ark ಯೋಜನೆಯಡಿ ಸರ್ಕಾರಿ ದರಗಳಲ್ಲಿ ಒಂದು ವರ್ಷದವರೆಗೆ ಪ್ರಾಯೋಗಿಕ ಆಧಾರದ ಮೇಲೆ 2ಎ ಚಿಕಿತ್ಸಾ ವಿಧಾನಗಳಿಗೆ ಹಾಗೂ ಇತರೆ ಚಿಕಿತ್ಸಾ ವಿಧಾನಗಳಿಗೆ ರೆಫೆರೆಲ್ ವಿನಾಯಿತಿ ನೀಡುವ ಬಗ್ಗೆ ಎಂದು ಪ್ರಸ್ತಾಪಿಸಲಾಗಿತ್ತು.
ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿವರವಾದ ಚರ್ಚೆಗಳು ನಡೆದಿದ್ದು, ಸರ್ಕಾರಿ ಸಂಸ್ಥೆಗಳು ಪ್ರಸ್ತುತ ಒದಗಿಸುತ್ತಿರುವ ತೃತೀಯ ಹಂತದ ಸೇವೆಗಳು ಹೆಚ್ಚಾಗಿ ಆಂಕೊಲಾಜಿ ಸಂಬಂಧಿತ ಸೇವೆಗಳಿಗಾಗಿ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಯಲ್ಲಿ ಮತ್ತು ಹೃದ್ರೋಗ ಸಂಬಂಧಿತ ಸೇವೆಗಳಿಗಾಗಿ ಶ್ರೀ ಜಯದೇವ ಹೃದಯ ರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕೇಂದ್ರೀಕೃತವಾಗಿವೆ ಎಂದು ಚರ್ಚೆ ನಡೆಯಿತು.
ಜಿಬಿಎ ಪ್ರದೇಶದಲ್ಲಿ ಸರ್ಕಾರಿ ಆರೋಗ್ಯ ಮೂಲಸೌಕರ್ಯಗಳ ಕೊರತೆಯು ಇರುತ್ತದೆ. ಬಿಬಿಎಂಪಿ ಪ್ರದೇಶದಲ್ಲಿನ ಆರೋಗ್ಯ ಮೂಲಸೌಕರ್ಯಗಳ ಅಧ್ಯಯನಕ್ಕಾಗಿ ರಚಿಸಲಾದ ತಜ್ಞರ ಸಮಿತಿಯು ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ಪತ್ರೆ ಹಾಸಿಗೆಗಳ ಗಮನಾರ್ಹ ಕೊರತೆಯನ್ನು ಎತ್ತಿ ತೋರಿಸಿದೆ ಎಂದು ಚರ್ಚೆಯಾಗಿತ್ತು.
ಈಗ ಸೂಪರ್ ಸ್ಪೆಷಾಲಿಟಿ ಆರೋಗ್ಯ ಸೇವೆಗಳ ಪ್ರವೇಶವನ್ನು ಸುಧಾರಿಸಲು ಸೀಮಿತ ಸರ್ಕಾರಿ ಸೌಲಭ್ಯಗಳ ಮೇಲಿನ ರೋಗಿಗಳ ಹೊರೆ ಕಡಿಮೆ ಮಾಡಲು ಮತ್ತು ಲಭ್ಯವಿರುವ ಖಾಸಗಿ ವೈದ್ಯಕೀಯ ಕಾಲೇಜು ಮೂಲಸೌಕರ್ಯಗಳ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಪ್ರಸ್ತಾಪಿಸಲಾಗಿತ್ತು.
ಆದ್ದರಿಂದ ಈ ಕುರಿತು ಚರ್ಚೆಯನ್ನು ನಡೆಸಿ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಪ್ರದೇಶದೊಳಗಿನ 4 ಪ್ರತಿಷ್ಠಿತ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಾದ
1. St. John Medical College, Bengaluru
2. M.S.Ramaiah Medical College, Bengaluru
3. Kempegowda Institute of Medical Sciences (KIMS)
4. Dr. Ambedkar Medical College Hospital, Bengaluru
ಇಲ್ಲಿ ಚಿಕಿತ್ಸೆಗಾಗಿ Ab-Ark ಯೋಜನೆಯಡಿ ಸರ್ಕಾರಿ ದರಗಳಲ್ಲಿ ಒಂದು ವರ್ಷದವರೆಗೆ ಪ್ರಾಯೋಗಿಕ ಆಧಾರದ ಮೇಲೆ 2ಎ ಚಿಕಿತ್ಸಾ ವಿಧಾನಗಳಿಗೆ ಹಾಗೂ ಇತರೆ ಚಿಕಿತ್ಸಾ ವಿಧಾನಗಳಿಗೆ ರೆಫೆರಲ್ ವಿನಾಯಿತಿ ನೀಡುವ ಬಗ್ಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

