ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆ ಜೂನ್ ಅಂತ್ಯದೊಳಗೆ ನಡೆಯಬೇಕಿದೆ. ಈ ಕುರಿತು ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ಈಗಾಗಲೇ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಚುನಾವಣೆಗೆ ಕಾಂಗ್ರೆಸ್ ತಯಾರಿ ಆರಂಭಿಸಿದೆ.
ಆದರೆ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ನಲ್ಲಿ ಜಿಬಿಎ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಬೇಕೆ?, ಎಷ್ಟು ಸೀಟು ಹಂಚಿಕೆ ಮಾಡಿಕೊಳ್ಳಬೇಕು? ಎಂಬುದು ಇನ್ನೂ ಸಹ ಗೊಂದಲದಲ್ಲಿದೆ. ಆದರೆ ಪಕ್ಷಗಳು ಚುನಾವಣಾ ತಯಾರಿ ನಡೆಸುತ್ತಿವೆ.
369 ವಾರ್ಡ್, 5 ನಗರ ಪಾಲಿಕೆಯನ್ನು ಜಿಬಿಎ ಹೊಂದಿದೆ. ರಾಜ್ಯದ ವಿಧಾನಸಭೆ ಚುನಾವಣೆಯಷ್ಟು ಮಹತ್ವವನ್ನು ಈ ಚುನಾವಣೆ ಹೊಂದಿದೆ. ಬಿಜೆಪಿ ಜಿಬಿಎ ಚುನಾವಣಾ ಉಸ್ತುವಾರಿಯಾಗಿ ರಾಮಮಾಧವ್ ನೇಮಕ ಮಾಡಿದೆ. ಸಹ ಉಸ್ತುವಾರಿಯಾಗಿ ಸತೀಶ್ ಪೂನಿಯಾ, ಸಂಜಯ್ ಉಪಾಧ್ಯಾಯ ನೇಮಿಸಲಾಗಿದೆ.
ಮೈತ್ರಿಗೊಂದಲ: ಎಚ್.ಡಿ.ದೇವೇಗೌಡ, ಬಿಜೆಪಿ ನಾಯಕರ ಹೇಳಿಕೆಗಳ ಬಳಿಕ ಜಿಬಿಎ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಕುರಿತು ಇನ್ನೂ ಗೊಂದಲ ಉಂಟಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ದೆಹಲಿಯಲ್ಲಿ ಮೈತ್ರಿಗೊಂದಲ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಜೆಡಿಎಸ್ ಮೂಲಗಳ ಮಾಹಿತಿ ಪ್ರಕಾರ ಜೆಡಿಎಸ್ ಪಕ್ಷ 80 ಸೀಟುಗಳಿಗೆ ಬೇಡಿಕೆ ಇಡಲಿದೆ. 70-80 ಸೀಟುಗಳನ್ನು ಬಿಜೆಪಿ ನೀಡದಿದ್ದರೆ ಜೆಡಿಎಸ್ ಪತ್ಯೇಕವಾಗಿ ಕಣಕ್ಕಿಳಿಯಲಿದೆ. ಚುನಾವಣಾ ಫಲಿತಾಂಶ ಬಂದ ಬಳಿಕ ಮೈತ್ರಿ ಕುರಿತು ಮುಂದಿನ ಮಾತುಕತೆ ನಡೆಸಲಾಗುತ್ತದೆ.
ಜಿಬಿಎ ಚುನಾವಣೆ ಕುರಿತು ಬೆಂಗಳೂರು ನಗರದ ನಾಯಕರು, ಮುಖಂಡರ ಜೊತೆ ಎಚ್.ಡಿ.ಕುಮಾರಸ್ವಾಮಿ 2 ಸಭೆಗಳನ್ನು ನಡೆಸಿದ್ದಾರೆ. ಒಂದು ವೇಳೆ ಸೀಟು ಹಂಚಿಕೆ, ಮೈತ್ರಿ ಮಾತುಕತೆ ಅಂತಿಮವಾಗಿಲ್ಲ ಎಂದಾದರೆ ಜೆಡಿಎಸ್ ಏಕಾಂಗಿಯಾಗಿ 85-100 ವಾರ್ಡ್‌ಗಳಲ್ಲಿ ಕಣಕ್ಕಿಳಿಯಲಿದೆ.
ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಳ್ಳುವುದಾದರೆ ಪ್ಲಾನ್ ‘ಎ’. ಮೈತ್ರಿ ಇಲ್ಲವಾದಲ್ಲಿ ಪ್ಲಾನ್ ‘ಬಿ’ ಹೀಗೆ ಎರಡು ಪ್ಲಾನ್ ಮಾಡಿಕೊಂಡು ತಯಾರಾಗಿ ನಿಂತಿದೆ. ಹಲವು ಬಿಜೆಪಿ ನಾಯಕರು ಸಹ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಅಪಸ್ವರ ಎತ್ತಿದ್ದು, ಮೈತ್ರಿ ಮುಂದುವರೆಯುವುದು ಗೊಂದಲದ ಗೂಡಾಗಿದೆ.

