HomeLatest Newsಬುಲ್ಡೋಜರ್ ನ್ಯಾಯ, ಅಕ್ರಮ ಒತ್ತುವರಿ ತೆರವು ವ್ಯತ್ಯಾಸ ತಿಳಿಸಿದ ಸಿದ್ದರಾಮಯ್ಯ

ಬುಲ್ಡೋಜರ್ ನ್ಯಾಯ, ಅಕ್ರಮ ಒತ್ತುವರಿ ತೆರವು ವ್ಯತ್ಯಾಸ ತಿಳಿಸಿದ ಸಿದ್ದರಾಮಯ್ಯ

“ಬುಲ್ಡೋಜರ್ ನ್ಯಾಯಕ್ಕೂ, ಅಕ್ರಮ ಒತ್ತುವರಿ ತೆರವಿಗೂ ಅಜಗಜಾಂತರ ವ್ಯತ್ಯಾಸವಿದೆ. ಪಿಣರಾಯಿ ವಿಜಯನ್ ಅವರು ವಾಸ್ತವ ಸಂಗತಿಗಳ ಅರಿವಿಲ್ಲದೆ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ” ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, “ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಹಲವರು ಅತಿಕ್ರಮವಾಗಿ ಗುಡಿಸಲು ನಿರ್ಮಿಸಿಕೊಂಡಿದ್ದರು, ಅದು ಜನ ವಸತಿಗೆ ಯೋಗ್ಯವಾದ ಸ್ಥಳವಾಗಿರಲಿಲ್ಲ” ಎಂದು ತಿಳಿಸಿದ್ದಾರೆ.

“ಅಲ್ಲಿನ ಕುಟುಂಬಗಳಿಗೆ ಹಲವು ಬಾರಿ ಬೇರೆಡೆಗೆ ಸ್ಥಳಾಂತರ ಆಗುವಂತೆ ನೋಟಿಸ್ ನೀಡಿದ್ದರೂ ಅವರು ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅವರನ್ನು ಆ ಜಾಗದಿಂದ ತೆರವುಗೊಳಿಸಲಾಗಿದೆ” ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಮಿಷನರ್ ಅವರ ಜೊತೆ ಮಾತನಾಡಿ, ಅವರೆಲ್ಲರಿಗೂ ತಾತ್ಕಾಲಿಕ ಆಶ್ರಯ, ಊಟ ಇನ್ನಿತರೆ ವ್ಯವಸ್ಥೆ ಮಾಡಿಕೊಡುವಂತೆ ಸೂಚನೆ ನೀಡಿದ್ದೇನೆ. ಅಲ್ಲಿ ಅತಿಕ್ರಮವಾಗಿ ವಾಸವಿದ್ದ ಬಹುತೇಕರು ವಲಸೆ ಕಾರ್ಮಿಕರು, ಸ್ಥಳೀಯ ನಿವಾಸಿಗಳಲ್ಲ, ಆದರೂ ಕೂಡ ಮಾನವೀಯತೆ ದೃಷ್ಟಿಯಿಂದ ಅವರಿಗೆ ಸೂಕ್ತ ವಸತಿ ವ್ಯವಸ್ಥೆ ಮಾಡಿಕೊಡುತ್ತೇವೆ” ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ರಾಜಕೀಯ ಜಟಾಪಟಿ: ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯ ಫಕೀರ್ ಕಾಲೋನಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಸುಮಾರು 180 ಮನೆಗಳನ್ನು ತೆರವುಗೊಳಿಸಿದ್ದಾರೆ. ಈ ತೆರವು ಕಾರ್ಯಾಚರಣೆ ಈಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಅದರಲ್ಲೂ ಕೇರಳ ಸಿಎಂ ಪಿಣರಾಯಿ ವಿಜಯನ್ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಮೂಲಕ ಈ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುವಂತೆ ಮಾಡಿದ್ದಾರೆ. ಬುಲ್ಡೋಜರ್ ನ್ಯಾಯಕ್ಕೂ ಈ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಗೂ ಹೋಲಿಕೆ ಮಾಡಲಾಗುತ್ತಿದೆ.

ಕರ್ನಾಟಕದಲ್ಲಿ ಬುಲ್ಡೋಜರ್‌ ಬಳಸಿ ಮುಸ್ಲಿಮರ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಬಳಿಕ ಸಿದ್ದರಾಮಯ್ಯ ಘಟನೆ ಕುರಿತು ಮಾತನಾಡಿದ್ದಾರೆ.

ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್, ಬೆಂಗಳೂರಿನ ಫಕೀರ್‌ ಕಾಲೋನಿ ಹಾಗೂ ನಸೀಮ್‌ ಲೇಔಟ್‌ನಲ್ಲಿ ವರ್ಷಗಳಿಂದ ವಾಸಿಸುತ್ತಿದ್ದ ಮುಸ್ಲಿಂ ಕುಟುಂಬಗಳ  ಮನೆಗಳನ್ನು ಧ್ವಂಸ ಮಾಡಿದ್ದು ಅತ್ಯಂತ ಆಘಾತಕಾರಿ ಮತ್ತು ನೋವಿನ ಸಂಗತಿ ಎಂದು ಹೇಳಿದ್ದರು.

ಉತ್ತರ ಭಾರತದಲ್ಲಿ ಸಂಘ ಪರಿವಾರ ಅನುಸರಿಸುತ್ತಿರುವ ಅಲ್ಪಸಂಖ್ಯಾತ ವಿರೋಧಿ ಆಕ್ರಮಣಕಾರಿ ರಾಜಕೀಯದ ಮತ್ತೊಂದು ಆವೃತ್ತಿಯನ್ನು ಕರ್ನಾಟಕದಲ್ಲಿಯೂ ಕಾಣಬಹುದು ಎಂದು ಟೀಕಿಸಿದ್ದರು.

ಕೊರೆಯುವ ಚಳಿ ಇರುವಾಗಲೇ ಇವರನ್ನು ಹೊರದಬ್ಬಲಾಗಿದೆ. ಉತ್ತರ ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ರಾಜಕೀಯ ದಾಳಿ ಈಗ ದಕ್ಷಿಣಕ್ಕೂ ಬಂದಿದೆ. ಈ ಕ್ರಮವನ್ನು ಕಾಂಗ್ರೆಸ್‌ ಸರ್ಕಾರ ಯಾವ ರೀತಿ ಸಮರ್ಥಿಸಿಕೊಳ್ಳುತ್ತದೆ? ಎಂದು ಪ್ರಶ್ನೆ ಮಾಡಿದ್ದರು.

ಯಲಹಂಕ ಸಮೀಪದ ಕೋಗಿಲು ಬಳಿಯ ಫಕೀರ್ ಕಾಲೋನಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಸುಮಾರು 180 ಮನೆಗಳನ್ನು ನೆಲಸಮಗೊಳಿಸಿದ್ದು 2,500ಕ್ಕೂ ಹೆಚ್ಚು ಜನರು ಬೀದಿಪಾಲಾಗಿದ್ದಾರೆ.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೋಗಿಲು ಗ್ರಾಮದ ಸರ್ವೆ ನಂ.99ರಲ್ಲಿ ಸರ್ಕಾರಕ್ಕೆ ಸೇರಿದ ಗೋಮಾಳ ಜಾಗದಲ್ಲಿ 25-30 ವರ್ಷಗಳಿಂದಲೂ ನಿರ್ಗತಿಕರು, ಬಡವರು ಮನೆ ಕಟ್ಟಿಕೊಂಡು ನೆಲೆಸಿದ್ದರು.

ಇಲ್ಲಿದ್ದ ಬಹುತೇಕರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. 14 ಎಕರೆ 36 ಗುಂಟೆ ವಿಸ್ತೀರ್ಣದ ಪಾಲಿಕೆ ಜಾಗದಲ್ಲಿ 180 ಮನೆಗಳನ್ನು ಅಕ್ರಮವಾಗಿ ನಿರ್ಮಿಸಿಕೊಂಡಿದ್ದಾರೆ ಎಂಬುದು ಅಧಿಕಾರಿಗಳ ವಾದವಾಗಿದೆ. ಈ ಮನೆಗಳನ್ನು ಈಗ ತೆರವು ಮಾಡಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular