HomeLatest Newsಗ್ಯಾಸ್ ಲೀಕ್ ಪತ್ತೆಹಚ್ಚುವುದು ಹೇಗೆ ? ಇಲ್ಲಿದೆ ಪ್ರತಿಯೊಬ್ಬ ಗೃಹಿಣಿಯೂ ತಿಳಿಯಲೇಬೇಕಾದ ಮಹತ್ವದ ಮಾಹಿತಿ !

ಗ್ಯಾಸ್ ಲೀಕ್ ಪತ್ತೆಹಚ್ಚುವುದು ಹೇಗೆ ? ಇಲ್ಲಿದೆ ಪ್ರತಿಯೊಬ್ಬ ಗೃಹಿಣಿಯೂ ತಿಳಿಯಲೇಬೇಕಾದ ಮಹತ್ವದ ಮಾಹಿತಿ !

ಪ್ರತಿಯೊಂದು ಮನೆಯ ಅಡುಗೆ ಕೋಣೆಯಲ್ಲೂ ಗೃಹಬಳಕೆಯ ಅಡುಗೆ ಅನಿಲವನ್ನು ಬಳಸುವಾಗ ಅತ್ಯಂತ ಎಚ್ಚರಿಕೆ ಹಾಗೂ ಮುನ್ನೆಚ್ಚರಿಕೆ ಅಗತ್ಯ. ಅಡುಗೆ ಮುಗಿದ ತಕ್ಷಣವೇ ಸಿಲಿಂಡರ್‌ನ ನಿಯಂತ್ರಕ ಗುಂಡಿಯನ್ನು ತಪ್ಪದೇ ಆಫ್ ಮಾಡುವುದು ಪ್ರಾಥಮಿಕ ಸುರಕ್ಷತಾ ಕ್ರಮವಾಗಿದ್ದು, ಇದು ಅನಿಲ ಸೋರಿಕೆಯನ್ನು ತಡೆಗಟ್ಟಿ ಸಂಭಾವ್ಯ ಅವಘಡಗಳನ್ನು ಬಹುತೇಕ ತಪ್ಪಿಸುತ್ತದೆ.

ಆದರೆ, ಕೇವಲ ನಿಯಂತ್ರಕ ಗುಂಡಿಯನ್ನು ಆಫ್ ಮಾಡುವುದರಿಂದಲೇ ಸಂಪೂರ್ಣ ಸುರಕ್ಷತೆ ಸಿಕ್ಕಂತಾಗುವುದಿಲ್ಲ. ನಿಯಂತ್ರಕ ಗುಂಡಿಯನ್ನು ನಿಲ್ಲಿಸಿದ ನಂತರವೂ ಅನಿಲ ಸೋರಿಕೆಯಾಗುವ ಸಾಧ್ಯತೆಗಳು ಇರುತ್ತವೆ. ವಿಶೇಷವಾಗಿ ನಿಯಂತ್ರಕ ಹಾಗೂ ಪೈಪ್ ಜೋಡಣೆಯಾಗುವ ಕಡೆಗಳಲ್ಲಿ ಇಂತಹ ಸೋರಿಕೆಗಳು ಹೆಚ್ಚಾಗಿ ಕಂಡುಬರುತ್ತವೆ. ಇವು ಅತ್ಯಂತ ನಿಧಾನಗತಿಯಲ್ಲಿ ಸೋರಿಕೆಯಾಗುವುದರಿಂದ ಸುಲಭವಾಗಿ ಗಮನಕ್ಕೆ ಬರುವುದಿಲ್ಲ. ಇಂತಹ ಸೂಕ್ಷ್ಮ ಸೋರಿಕೆಗಳು ಅಡುಗೆ ಅನಿಲವನ್ನು ಅನಗತ್ಯವಾಗಿ ವ್ಯರ್ಥ ಮಾಡುವುದಲ್ಲದೆ, ದೊಡ್ಡ ಮಟ್ಟದ ಬೆಂಕಿ ಅವಘಡಗಳಿಗೂ ದಾರಿ ಮಾಡಿಕೊಡಬಹುದು.

ಕಾಲಕ್ರಮೇಣ ಪೈಪ್ ಮಡಚಿಕೊಳ್ಳುವುದು ಅಥವಾ ಜೋಡಣೆಯ ಭಾಗ ಸಡಿಲಗೊಳ್ಳುವುದರಿಂದ ಈ ಸಮಸ್ಯೆ ಉದ್ಭವಿಸುತ್ತದೆ. ಬರಿಗಣ್ಣಿಗೆ ಕಾಣಿಸದ ಇಂತಹ ಅನಿಲ ಸೋರಿಕೆಯನ್ನು ಪತ್ತೆಹಚ್ಚಲು ಮನೆಯಲ್ಲೇ ಸುಲಭವಾದ ಸಾಬೂನು ನೀರಿನ ಪರೀಕ್ಷೆಯನ್ನು ಕೈಗೊಳ್ಳಬಹುದು. ಒಂದು ಲೋಟ ನೀರಿಗೆ ಸ್ವಲ್ಪ ಸಾಬೂನಿನ ಪುಡಿ ಅಥವಾ ದ್ರವ ರೂಪದ ಸಾಬೂನನ್ನು ಬೆರೆಸಿ ನೊರೆ ಬರುವಂತೆ ದ್ರಾವಣವನ್ನು ತಯಾರಿಸಿಕೊಳ್ಳಬೇಕು. ಈ ದ್ರಾವಣವನ್ನು ನಿಯಂತ್ರಕ ಹಾಗೂ ಪೈಪ್‌ನ ಜೋಡಣೆ ಇರುವ ಜಾಗಗಳಿಗೆ ಸವರಬೇಕು. ಒಂದು ವೇಳೆ ಎಲ್ಲಾದರೂ ಅನಿಲ ಸೋರಿಕೆಯಾಗುತ್ತಿದ್ದರೆ, ಆ ಭಾಗದಲ್ಲಿ ಗುಳ್ಳೆಗಳು ಏಳಲಾರಂಭಿಸುತ್ತವೆ. ಇದರಿಂದ ಅನಿಲ ಸೋರಿಕೆಯಾಗುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಪ್ರತಿ ತಿಂಗಳಿಗೊಮ್ಮೆ ಈ ಸರಳ ಪರೀಕ್ಷೆಯನ್ನು ನಡೆಸುವುದು ಉತ್ತಮ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ರೀತಿ ಅನಿಲ ಸೋರಿಕೆಯನ್ನು ಪರೀಕ್ಷಿಸುವ ಸಂದರ್ಭದಲ್ಲಿ ಸುತ್ತಮುತ್ತ ಯಾವುದೇ ಕಾರಣಕ್ಕೂ ಬೆಂಕಿಪೊಟ್ಟಣ ಅಥವಾ ಲೈಟರ್‌ಗಳನ್ನು ಹೊತ್ತಿಸಬಾರದು. ಏಕೆಂದರೆ ಅತ್ಯಂತ ಸಣ್ಣ ಪ್ರಮಾಣದ ಸೋರಿಕೆಯಿದ್ದರೂ ಬೆಂಕಿ ತಕ್ಷಣವೇ ವ್ಯಾಪಿಸುವ ಅಪಾಯವಿರುತ್ತದೆ. ಒಂದು ವೇಳೆ ಪರೀಕ್ಷೆಯ ವೇಳೆ ಸೋರಿಕೆ ಕಂಡುಬಂದರೆ, ಯಾವುದೇ ಕಾರಣಕ್ಕೂ ನೀವೇ ಸ್ವತಃ ಪೈಪ್ ಅಥವಾ ನಿಯಂತ್ರಕವನ್ನು ಸರಿಪಡಿಸಲು ಮುಂದಾಗಬಾರದು. ತಕ್ಷಣವೇ ಅಧಿಕೃತ ಏಜೆನ್ಸಿಯ ತರಬೇತಿ ಪಡೆದ ತಂತ್ರಜ್ಞರನ್ನು ಕರೆಸಿ ದುರಸ್ತಿ ಮಾಡಿಸುವುದು ಅತ್ಯಂತ ಸುರಕ್ಷಿತ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular