ನವದೆಹಲಿ: ದೆಹಲಿಯಲ್ಲಿ 16 ವರ್ಷದ ಬಾಲಕಿ ಮೇಲೆ ಸ್ಲೀಪರ್ ಬಸ್‌ನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದ್ದು, ಘಟನೆ ತೀವ್ರ ಆಘಾತಕ್ಕೆ ಕಾರಣವಾಗಿದೆ. ಗ್ರೇಟರ್ ನೋಯ್ಡಾದ ಪರಿ ಚೌಕ್‌ನಿಂದ ಕಾಶ್ಮೀರಿ ಗೇಟ್‌ವರೆಗೆ ಸುಮಾರು 47 ಕಿ.ಮೀ. ಪ್ರಯಾಣದ ವೇಳೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಹಾಗೂ ಕಂಡಕ್ಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ 11ನೇ ತರಗತಿ ವಿದ್ಯಾರ್ಥಿನಿಯಾಗಿರುವ ಬಾಲಕಿ, ಕುಟುಂಬದೊಂದಿಗೆ ಜಗಳವಾದ ಬಳಿಕ ಮನೆ ತೊರೆದು ನೋಯ್ಡಾದಲ್ಲಿರುವ ಸಂಬಂಧಿಕರನ್ನು ಭೇಟಿಯಾಗಲು ತೆರಳುತ್ತಿದ್ದಳು ಎನ್ನಲಾಗಿದೆ.
ಭಾರೀ ಮಳೆ ಹಾಗೂ ಕತ್ತಲಿನ ನಡುವೆ ಪರಿ ಚೌಕ್‌ನಲ್ಲಿ ಬಾಲಕಿ ಸಿಲುಕಿಕೊಂಡಿದ್ದಳು. ಈ ವೇಳೆ ಖಾಲಿ ಸ್ಲೀಪರ್ ಬಸ್ ಅಲ್ಲಿಗೆ ಬಂದಿದ್ದು, ಬಾಲಕಿ ಬಸ್ ನಿಲ್ಲಿಸುವಂತೆ ಸೂಚಿಸಿದ್ದಾಳೆ. ಬಸ್ ನೋಯ್ಡಾ ಸೆಕ್ಟರ್ 63ರತ್ತ ತೆರಳುತ್ತಿದೆ ಎಂದು ಚಾಲಕ ಮತ್ತು ಕಂಡಕ್ಟರ್ ಹೇಳಿ, ಆಕೆಗೆ ಬಸ್‌ನಲ್ಲಿ ಹತ್ತಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ.
ಬಸ್ ಚಲಿಸಲು ಆರಂಭಿಸಿದ ಬಳಿಕ ಕಂಡಕ್ಟರ್ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಚಾಲಕ ಮತ್ತು ಕಂಡಕ್ಟರ್ ಇಬ್ಬರೂ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ವೇಳೆ ಪ್ರತಿರೋಧಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ತಡರಾತ್ರಿ ಆರೋಪಿಗಳು ಬಾಲಕಿಯನ್ನು ರಿಂಗ್ ರಸ್ತೆಯಲ್ಲಿರುವ ಕಾಶ್ಮೀರಿ ಗೇಟ್ ಬಸ್ ಟರ್ಮಿನಲ್ ಬಳಿ ಇಳಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬಳಿಕ ಬಾಲಕಿ ಕಾಶ್ಮೀರಿ ಗೇಟ್ ಪೊಲೀಸರನ್ನು ಸಂಪರ್ಕಿಸಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ.
ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು, ತಿಮಾರ್ಪುರದ ಬಸ್ ಪಾರ್ಕಿಂಗ್ ಪ್ರದೇಶದಲ್ಲಿ ಚಾಲಕ ಮತ್ತು ಕಂಡಕ್ಟರ್‌ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಸ್ಲೀಪರ್ ಬಸ್‌ನ್ನೂ ವಶಕ್ಕೆ ಪಡೆದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಈ ಬಸ್ ಹಿಂದೆ ಯಾಂತ್ರಿಕ ದೋಷಕ್ಕೊಳಗಾಗಿತ್ತು. ದುರಸ್ತಿಗಾಗಿ ಸೂರಜ್‌ಪುರದ ವರ್ಕ್‌ಶಾಪ್‌ಗೆ ಕರೆದೊಯ್ಯಲಾಗಿತ್ತು. ದುರಸ್ತಿ ಮುಗಿದ ಬಳಿಕ ಚಾಲಕ ಮತ್ತು ಕಂಡಕ್ಟರ್ ಖಾಲಿ ಬಸ್ ಅನ್ನು ತಿಮಾರ್ಪುರಕ್ಕೆ ಕೊಂಡೊಯ್ಯುತ್ತಿದ್ದರು. ಈ ವೇಳೆ ಪರಿ ಚೌಕ್‌ನಲ್ಲಿ ಬಾಲಕಿ ಅವರಿಗೆ ಸಿಕ್ಕಿದ್ದಾಳೆ ಎನ್ನಲಾಗಿದೆ.ಸ್ಲೀಪರ್ ಬಸ್‌ನಲ್ಲಿ ಪರದೆಗಳಿದ್ದ ಕಾರಣ ಒಳಗೆ ನಡೆಯುತ್ತಿದ್ದ ಘಟನೆ ಹೊರಗಿನಿಂದ ಸುಲಭವಾಗಿ ಕಾಣುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

