ಕೊಪ್ಪಳ : ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಇವರ ಸಂಯುಕ್ತಾಶ್ರಯದಲ್ಲಿ ಗಂಗಾವತಿಯಲ್ಲಿ ಪ್ಯಾಶನ್ ಡಿಸೈನಿಂಗ್ ಮತ್ತು ಟೈಲರಿಂಗ್ ಬಗ್ಗೆ 24 ದಿನಗಳ ಕೌಶಲ್ಯಾಧಾರಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಯಲ್ಲಿ ಆಯಾ ವೃತ್ತಿಗಳಲ್ಲಿ ಕೌಶಲ್ಯದ ಪ್ರಾಯೋಗಿಕ ಹಾಗೂ ಸಿದ್ಧಾಂತದೊಂದಿಗೆ ಸ್ವಯಂ ಉದ್ಯಮಗಳ ಬಗ್ಗೆ ಮಾಹಿತಿ, ಉದ್ಯಮಶೀಲತೆ, ಯಶಸ್ವಿ ಉದ್ಯಮಶೀಲರ ಗುಣಲಕ್ಷಣಗಳು, ಉದ್ಯಮಗಳನ್ನು ಪ್ರಾರಂಭಿಸುವ ಹಂತಗಳು, ಸ್ವಯಂ ಉದ್ಯೋಗಕ್ಕೆ ಇರುವ ಸರ್ಕಾರದ ಯೋಜನೆಗಳು, ಬ್ಯಾಂಕ್ ವ್ಯವಹಾರ ಮಾಡುವ ಬಗ್ಗೆ, ಸಾಲ ಮತ್ತು ಹಣಕಾಸು ಮತ್ತು ಹಣಕಾಸೇತರ ಸೌಲಭ್ಯಗಳ ಬಗ್ಗೆ, ಲೆಕ್ಕ ಪತ್ರ ನಿರ್ವಹಣೆ, ಯೋಜನಾ ವರದಿ ತಯಾರಿಕೆ, ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಲ್ಲಿ ಸಹಾಯ ನೀಡುವದು ಮತ್ತು ಸಂಬಂಧಪಟ್ಟ ಇತ್ಯಾದಿ ವಿಷಯಗಳ ಬಗ್ಗೆ ಅನುಭವಿ ಅತಿಥಿ ಬೋಧಕರಿಂದ ಉಪನ್ಯಾಸ ಹಾಗೂ ಮಾಹಿತಿ ನೀಡಲಾಗುವದು. ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಸ್ವಯಂ ಉದ್ಯಮಗಳನ್ನು ಪ್ರಾರಂಭಿಸಲು ಅರ್ಹರಿಗೆ ಸರ್ಕಾರಿ ಯೋಜನೆ ಅಡಿಯಲ್ಲಿ ಬ್ಯಾಂಕ್ ಸಾಲ ಸೌಲಭ್ಯಕ್ಕಾಗಿ ಶಿಫಾರಸ್ಸು ಮಾಡಲಾಗುವದು.
ತರಬೇತಿಯಲ್ಲಿ ಭಾಗವಹಿಸಲು 18 ರಿಂದ 35 ವರ್ಷದವರಾಗಿರಬೇಕು. ಕನಿಷ್ಠ SSLC ಪಾಸ್ ಆದ ಪರಿಶಿಷ್ಟ ಪಂಗಡದ (ST) ಮಹಿಳಾ ಅಭ್ಯರ್ಥಿಗಳು ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಆಸಕ್ತರು ಸೆಪ್ಟೆಂಬರ್ 28 ರೊಳಗಾಗಿ ಜಂಟಿ ನಿರ್ದೇಶಕರು, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರದ ಕಟ್ಟಡ, ಹೊಸಪೇಟೆ ರಸ್ತೆ, ನಗರ ಸಭೆ ಎದುರು, ಕೊಪ್ಪಳ 583231 ಇಲ್ಲಿಗೆ ಭೇಟಿ ನೀಡಬಹುದು ಅಥವಾ ಮೋಬೈಲ್ ಸಂಖ್ಯೆ 7204016012 ಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕೊಪ್ಪಳ ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಾವಿದರ ಗುರುತಿನ ಚೀಟಿಗಾಗಿ ಅರ್ಜಿ ಆಹ್ವಾನ: ಸೆ. 30 ಕೊನೆಯ ದಿನಾಂಕ
ಕೊಪ್ಪಳ : ಕೊಪ್ಪಳ ಜಿಲ್ಲೆಯ ಅರ್ಹ ಕಲಾವಿದರಿಗೆ ‘ಕಲಾವಿದರ ದತ್ತಾಂಶ ಯೋಜನೆ’ಯಡಿ ಗುರುತಿನ ಚೀಟಿ ವಿತರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅರ್ಜಿಗಳನ್ನು ಆಹ್ವಾನಿಸಿದೆ.
ಸಾಹಿತ್ಯ, ರಂಗಭೂಮಿ, ಜಾನಪದ, ಸಂಗೀತ, ನೃತ್ಯ, ಚಿತ್ರಕಲೆ ಹಾಗೂ ಇತ್ಯಾದಿ ಕಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜಿಲ್ಲೆಯ ಅರ್ಹ ಕಲಾವಿದರು ನಿಗದಿತ ನಮೂನೆಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಗಳನ್ನು ಸಲ್ಲಿಸಲು ಇದೇ ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದ್ದು, ಆಸಕ್ತ ಕಲಾವಿದರು ನಿಗದಿತ ಅವಧಿಯೊಳಗೆ ಅರ್ಜಿಗಳನ್ನು ‘ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ’ ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಈ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಚಿತ ಸ್ವಯಂ ಉದ್ಯೋಗ ತರಬೇತಿ, ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಕೊಪ್ಪಳ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಕೊಪ್ಪಳ ಇವರ ವತಿಯಿಂದ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗಾಗಿ ಉಚಿತ ಸ್ವಯಂ ಉದ್ಯೋಗ ತರಬೇತಿ ಹಾಗೂ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ತರಬೇತಿಯಲ್ಲಿ 10 ದಿನಗಳ ಅಣಬೆ ಬೇಸಾಯ ತರಬೇತಿ, 13 ದಿನಗಳ ಜೂಟ್ ಬ್ಯಾಗ್ ತಯಾರಿಕೆ ತರಬೇತಿ ಹಾಗೂ 12 ದಿನಗಳ ಪಾಸ್ಟಪುಡ್ ಸ್ಟಾಲ್ ಉದ್ಯಮಿ ತರಬೇತಿ ಹಾಗೂ 12 ದಿನಗಳ ಪೇಪರ್ ಕವರ್, ಪೈಲ್ ಏನವೆಲಪ್ ತರಬೇತಿ ನಡೆಯಲಿದ್ದು, ಅಕ್ಟೋಬರ್ 3 ರಂದು ಸಂದರ್ಶನ ನಡೆಯಲಿದೆ ಮತ್ತು ಅಕ್ಟೋಬರ್ 5 ರಿಂದ ತರಬೇತಿಯು ಪ್ರಾರಂಭವಾಗಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯ ಒದಗಿಸಲಾಗುವುದು. ಜೊತೆಗೆ ತರಬೇತಿ ಪೂರ್ಣಗೊಳಿಸಿದವರಿಗೆ ಬ್ಯಾಂಕಿನ ಮೂಲಕ ಸಾಲ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು 18 ರಿಂದ 45 ವರ್ಷದೊಳಗಿರಬೇಕು. ಅಭ್ಯರ್ಥಿಗಳು ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು ಮತ್ತು ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ನಿವಾಸಿಯಾಗಿರಬೇಕು. ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಆಸಕ್ತರು ತಮ್ಮ ಆಧಾರ ಕಾರ್ಡ್, ರೇಶನ್ ಕಾರ್ಡ್, ಪಾನ್ ಕಾರ್ಡ್, ಎಸ್ಬಿಐ ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್, ವಿದ್ಯಾಭ್ಯಾಸ ದಾಖಲೆ ಹಾಗೂ 3 ಪಾಸ್ಪೋರ್ಟ್ ಸೈಜ್ ಭಾವಚಿತ್ರಗಳೊಂದಿಗೆ ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಕಚೇರಿ ಅಥವಾ ದೂ.ಸಂ.: 08539-231038, ಮೊ.ಸಂ: 9483618178, 7259073827, 9538096796, 9481085217 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಎಸ್ಬಿಐ ಆರ್ಸೆಟಿಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

