ಗದಗ: ಕ್ಷುಲ್ಲಕ ಕಾರಣಕ್ಕಾಗಿ ತಂದೆ ಹಾಗೂ ಮಗನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿರುವ ಘಟನೆ ಗದಗ ಜಿಲ್ಲೆಯ ಅಡವಿ ಸೋಮಾಪುರ ಗ್ರಾಮದಲ್ಲಿ ನಡೆದಿದೆ.
ಮನೆ ಮುಂದೆ ಹಾರ್ನ್ ಮಾಡಿದ್ದಕ್ಕೆ ಎರಡು ಕುಟುಂಬಗಳ ನಡುವೆ ಆರಂಭವಾದ ಗಲಾಟೆ ಮಾರಾಮಾರಿಗೆ ತಿರುಗಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ತಂದೆ ಹಾಗೂ ಮಗ ಇಬ್ಬರಿಗೂ ಚಾಕುವಿಂದ ಇರಿದಿದ್ದಾರೆ.
ಹೂವಪ್ಪ ಕಂಬಳಿ (45) ಹಾಗೂ ಪುತ್ರ 17 ವರ್ಷದ ಶರಣಪ್ಪ ಕಂಬಳಿ ಚಾಕುವಿಂದ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಗಳ ಬಿಡಿಸಲು ಹೋದ ಸಹೋದರ ಮಲ್ಲಪ್ಪ ಮೇಲೂ ಹಲ್ಲೆ ನಡೆಸಲಾಗಿದೆ.
ಚಕ್ರಣ್ಣವರ್ ಕುಟುಂಬದ ಈರಪ್ಪ, ಚಿನ್ನಪ್ಪ, ದೊಡ್ದಯಲ್ಲಪ್ಪ ಹಾಗೂ ರಮೇಶ್ ಚಾಕು ಇರಿದು ರಾಡ್ ನಿಂದ ಹಲ್ಲೆ ನಡೆಸಿದ ಆರೋಪಿಗಳು. ಎರಡೂ ಕುಟುಂಬಗಳ ನಡುವೆ ಮೊದಲಿನಿಂದಲೂ ವೈಷಮ್ಯವಿತ್ತು. ಗ್ರಾಮದ ಹಿರಿಯರು ರಾಜಿ ಪಂಚಾಯ್ತಿ ಮಾಡಿ ಸಮಾಧಾನ ಪಡಿಸಿದ್ದರು. ಇದೀಗ ಕ್ಷುಲ್ಲಕ ಕಾರಣಕ್ಕೆ ಮತ್ತೆ ಗಲಾಟೆ ನಡೆದು ಮಾರಾಮಾರಿಯೇ ನಡೆದಿದೆ. ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

