ಬೆಂಗಳೂರು: ಮಕ್ಕಳಿಗೆ ಫಾರ್ಮುಲಾ ಆಹಾರ ನೀಡುವ ಮುನ್ನ ಪೋಷಕರು ಎಚ್ಚರಿಕೆಯಿಂದಿರಬೇಕಾದ ಅಗತ್ಯವಿದೆ. ಫಾರ್ಮುಲಾ ಆಹಾರಗಳಲ್ಲಿ ಮಿಸ್ ಬ್ರ್ಯಾಂಡಿಂಗ್ ಆಗುತ್ತಿರುವ ಬಗ್ಗೆ ಕೇಳಿಬಂದಿದ್ದು, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಶಿಶು ಆಹಾರ ಉತ್ಪನ್ನಗಳ ಮೇಲೆ ನಿಗಾ ವಹಿಸಿದೆ.
ಎಫ್.ಎಸ್.ಎಸ್.ಎ.ಐ ಅಧಿಕಾರಿಗಳು ಬೆಂಗಳೂರಿನ M/s British Lifesciences Pvt. Ltd. ಸಂಸ್ಥೆ ಮೇಲೆ ದಾಳಿ ನಡೆಸಿದ ವೇಳೆ ಮಿಸ್ ಬ್ರಾಂಡೆಡ್ ಶಿಶು ಆಹಾರ ಉತ್ಪನ್ನಗಳು ಪತ್ತೆಯಾಗಿವೆ. ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಶಿಶು ಆಹಾರ ಉತ್ಪನ್ನಗಳ ಸುರಕ್ಷತೆ ಹಾಗೂ ಲೇಬಲಿಂಗ್ ನಿಯಮಗಳ ಪಾಲನೆ ಕುರಿತು ಎಫ್.ಎಸ್.ಎಸ್.ಎ.ಐ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ನಿಯಮ ಉಲ್ಲಂಘನೆ ಮಾಡಿ ಲೇಬಲ್ ಮಾಡಲಾಗಿರುವ ಶಿಶು ಆಹಾರ ಉತ್ಪನ್ನಗಳು ಪತ್ತೆಯಾಗಿವೆ.
ಎಫ್.ಎಸ್.ಎಸ್ ಆಕ್ಟ್ ಅಡಿ ಸಂಸ್ಥೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವ ಎಫ್.ಎಸ್.ಎಸ್.ಎ.ಐ ಆಹಾರ ಉತ್ಪನ್ನಗಳ ಲೇಬಲಿಂಗ್ ಹಾಗೂ ನಿಯಮಗಳ ಪಾಲನೆಯಲ್ಲಿ ಉಲ್ಲಂಘನೆಯಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದೆ.
ಫಾರ್ಮುಲಾ ಆಹಾರವನ್ನು ಶಿಶುಗಳ ಪೌಷ್ಟಿಕ ಅಗತ್ಯಗಳನ್ನು ಪೂರೈಸಲು ವೈದ್ಯರ ಸಲಹೆಯ ಮೇರೆಗೆ ನೀಡಲಾಗುತ್ತದೆ. ವಿಶೇಷವಾಗಿ ಅವಧಿಗೂ ಮುನ್ನ ಜನಿಸುವ ಶಿಶುಗಳಿಗೆ ಕೆಲ ಸಂದರ್ಭಗಳಲ್ಲಿ ವೈದ್ಯರು ಫಾರ್ಮುಲಾ ಆಹಾರವನ್ನು ಶಿಫಾರಸು ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ನ್ಯೂಟ್ರಿಷನಲ್ ಉತ್ಪನ್ನಗಳು, Infant Formula ಹಾಗೂ ಶಿಶುಗಳ Cereals ಸೇರಿದಂತೆ ವಿವಿಧ ಉತ್ಪನ್ನಗಳ ಗುಣಮಟ್ಟ ಮತ್ತು ಲೇಬಲಿಂಗ್ ಕುರಿತು ಆಹಾರ ಸುರಕ್ಷತಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಆಹಾರ ಉತ್ಪನ್ನದ ಪ್ಯಾಕೇಜ್ ಅಥವಾ ಲೇಬಲ್‌ನಲ್ಲಿ ಉತ್ಪನ್ನದ ಬಗ್ಗೆ ತಪ್ಪು, ಅಪೂರ್ಣ ಅಥವಾ ಗ್ರಾಹಕರನ್ನು ದಾರಿತಪ್ಪಿಸುವ ಮಾಹಿತಿ ನೀಡಿದರೆ ಅದನ್ನು ಮಿಸ್ ಬ್ರ್ಯಾಂಡಿಂಗ್ ಎಂದು ಕರೆಯಲಾಗುತ್ತದೆ.
ಶಿಶು ಆಹಾರ ಉತ್ಪನ್ನಗಳ ವಿಚಾರದಲ್ಲಿ ಲೇಬಲ್‌ನಲ್ಲಿರುವ ಮಾಹಿತಿ, ಪೌಷ್ಟಿಕಾಂಶದ ವಿವರಗಳು, ಬಳಕೆ ವಿಧಾನ ಹಾಗೂ ಇತರ ಕಡ್ಡಾಯ ಮಾಹಿತಿಗಳು ನಿಯಮಾನುಸಾರವಾಗಿರುವುದು ಅತ್ಯಂತ ಮುಖ್ಯ. ಹೀಗಾಗಿ, ಪತ್ತೆಯಾಗಿರುವ ಉತ್ಪನ್ನಗಳಲ್ಲಿ ನಿಜವಾದ ಉತ್ಪನ್ನ ಮತ್ತು ಲೇಬಲ್ ನಡುವಿನ ವ್ಯತ್ಯಾಸವಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲನೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

