ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಗರಣಗಳ ವಿರುದ್ಧ ಪ್ರತಿಭಟಿಸಲು ರಾಜ್ಯ ಬಿಜೆಪಿ ರಾಯಚೂರು ಜಿಲ್ಲೆ ಲಿಂಗಸುಗೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಕೈಗೊಂಡಿದೆ. ಪಾದಯಾತ್ರೆಯ 3ನೇ ದಿನವಾದ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರೈತ ಮಹಿಳೆಯರು ತಂದಿದ್ದ ಬುತ್ತಿ ಸೇವಿಸಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ವಿಜಯೇಂದ್ರ, ರೈತ ಮಹಿಳೆಯರ ಅಕ್ಕರೆಯ ಸತ್ಕಾರ – ಅನ್ನದಾತ ತಾಯಂದಿರ ವಾತ್ಸಲ್ಯಕ್ಕೆ ಎಂದೆಂದಿಗೂ ಋಣಿ ಎಂದು ತಿಳಿಸಿದ್ದಾರೆ.
ಇಂದಿನ ಪಾದಯಾತ್ರೆಯಲ್ಲಿ ಕುನ್ನಟಗಿ ಗ್ರಾಮದ ಮೂಲಕ ನಾವು ನಡೆಯುತ್ತಿದ್ದಾಗ, ಊಟದ ಸಮಯವಾದದ್ದರಿಂದ ಅಲ್ಲಿನ ರೈತ ಮಹಿಳೆಯರು ಬಹಳ ಪ್ರೀತಿಯಿಂದ ಕರೆದು, ತಾವು ತಂದಿದ್ದ ಬುತ್ತಿಯನ್ನು ತಮ್ಮ ಕೈಯಾರೆ ನಮಗೆ ಉಣಬಡಿಸಿದರು. ರೈತರೊಂದಿಗೆ, ಅವರ ಹೊಲದಲ್ಲಿ ಅಕ್ಕರೆಯಿಂದ ನೀಡಿದ ಅವರ ಮನೆಯೂಟದ ಸವಿಯನ್ನು, ಆ ಸಂತೃಪ್ತಿಯನ್ನು ವರ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಮಣ್ಣನ್ನೇ ನಂಬಿ ಸರಳವಾಗಿ ಬದುಕುವ ರೈತರ ಮತ್ತು ತಾಯಂದಿರ ಅಪ್ಯಾಯತೆ ಮತ್ತು ವಾತ್ಸಲ್ಯ ದಣಿವನ್ನು ದೂರ ಮಾಡಿರುವುದಷ್ಟೇ ಅಲ್ಲ, ಹೊಸ ಚೈತನ್ಯವನ್ನು ತುಂಬಿದೆ. ನಮ್ಮ ರೈತ ತಾಯಂದಿರ ಋಣ ತೀರಿಸಲು, ಅವರ ನೆಮ್ಮದಿಗಾಗಿ, ಅನ್ನದಾತರ ಹಕ್ಕಿಗಾಗಿ ಇನ್ನಷ್ಟು ಬದ್ಧತೆಯಿಂದ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

