ನೀವು ಮನೆಯ ಮೇಲೆ ಸೋಲಾರ್ ಪವರ್ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳಲು ಯೋಜಿಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಜೂನ್ 1 ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಇದರಿಂದಾಗಿ ಸೋಲಾರ್ ಪ್ಯಾನಲ್‌ಗಳ ಬೆಲೆ ಹೆಚ್ಚಾಗಲಿದೆ. ಆದರೆ, ಕೇಂದ್ರ ಸರ್ಕಾರ ನೀಡುವ ಸಬ್ಸಿಡಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳಲು ಇತ್ತೀಚಿನ ದಿನಗಳಲ್ಲಿ ಜನರು ಮನೆಯ ಮೇಲ್ಛಾವಣಿಯಲ್ಲಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದ ವಿದ್ಯುತ್ ಬಿಲ್ ವೆಚ್ಚ ಕಡಿಮೆಯಾಗುತ್ತದೆ. ಬೇಸಿಗೆ ಕಾಲದಲ್ಲಿ ವಿದ್ಯುತ್ ಕಡಿತ ಹೆಚ್ಚಾಗಿರುವುದರಿಂದ ಜನ ತೊಂದರೆ ಅನುಭವಿಸುತ್ತಾರೆ. ಸೋಲಾರ್ ಪ್ಯಾನಲ್ ಅಳವಡಿಸಿಕೊಂಡರೆ ಅಂತಹ ಸಮಸ್ಯೆ ಇರುವುದಿಲ್ಲ. ಮನೆಗೆ 24 ಗಂಟೆಯೂ ವಿದ್ಯುತ್ ಪೂರೈಕೆ ಇರುತ್ತದೆ. ಸರ್ಕಾರವು ಸಬ್ಸಿಡಿಗಳನ್ನು ಸಹ ನೀಡುತ್ತಿರುವುದರಿಂದ ಜನರು ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಆದರೆ, ಜೂನ್ 1 ರಿಂದ ಸೋಲಾರ್ ಉದ್ಯಮಕ್ಕೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇದರಿಂದ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳಲು ಬಯಸುವವರಿಗೆ ವೆಚ್ಚದ ಹೊರೆ ಹೆಚ್ಚಾಗಲಿದೆ.
ಹೊಸ ನಿಯಮಗಳು ಇವೇ: ಮನೆಗಳಲ್ಲಿ ಬಳಸುವ ಸೋಲಾರ್ ಪ್ಯಾನಲ್‌ಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಪರಿಚಯಿಸಿದೆ. ಇದುವರೆಗೆ ಇವುಗಳನ್ನು ಸರ್ಕಾರದ ಅನುಮೋದಿತ ಪಟ್ಟಿಯ (ALMM ಪಟ್ಟಿ-I) ಪ್ರಕಾರ ದೃಢೀಕರಿಸಬೇಕಿತ್ತು. ಆದರೆ ಈಗ ನಿಯಮವನ್ನು ಇನ್ನಷ್ಟು ಕಠಿಣಗೊಳಿಸಲಾಗಿದೆ. ಸೋಲಾರ್ ಪ್ಯಾನಲ್‌ಗಳಲ್ಲಿ ಬಳಸುವ ಸಣ್ಣ ಸೌರ ಕೋಶಗಳನ್ನು (Solar Cells) ಕೂಡ ಕಡ್ಡಾಯವಾಗಿ ಸರ್ಕಾರದ ಅನುಮೋದಿತ ಪಟ್ಟಿಯಲ್ಲಿ (ಪಟ್ಟಿ-II) ಸೇರಿಸಬೇಕು. ಜೂನ್ 1 ರಿಂದ ಈ ಹೊಸ ನಿಯಮಗಳು ಜಾರಿಗೆ ಬರಲಿವೆ. ಗುಣಮಟ್ಟವಿಲ್ಲದ ವಿದೇಶಿ ಉಪಕರಣಗಳ ಆಮದನ್ನು ತಡೆಯಲು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಇದರ ಪರಿಣಾಮವಾಗಿ ಸೋಲಾರ್ ಪ್ಯಾನಲ್‌ಗಳ ಬೆಲೆ ಹೆಚ್ಚಾಗಲಿದೆ. 1 kW ಸೌರ ವ್ಯವಸ್ಥೆಯನ್ನು ಅಳವಡಿಸಲು ಹಿಂದಿಗಿಂತಲೂ ಹೆಚ್ಚುವರಿಯಾಗಿ ಸುಮಾರು 3 ಸಾವಿರ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು 2 kW ವ್ಯವಸ್ಥೆಗೆ 6 ಸಾವಿರ ರೂ. ಮತ್ತು 3 kW ವ್ಯವಸ್ಥೆಗೆ 9 ಸಾವಿರ ರೂ. ವರೆಗೆ ಹೆಚ್ಚುವರಿ ವೆಚ್ಚವಾಗಬಹುದು.
ಸಬ್ಸಿಡಿಗಳ ಮುಂದುವರಿಕೆ: ಸೋಲಾರ್ ಪ್ಯಾನಲ್‌ಗಳ ಬೆಲೆ ಏರಿಕೆಯಾದರೂ, ‘ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ’ (PM Surya Ghar Muft Bijli Yojana) ಅಡಿಯಲ್ಲಿ ಬಡವರಿಗೆ ಸದ್ಯ ಸಿಗುತ್ತಿರುವ ಸಬ್ಸಿಡಿ ಮುಂದುವರಿಯಲಿದೆ. 1 ಕಿಲೋವ್ಯಾಟ್‌ಗೆ 30 ಸಾವಿರ ರೂ., 2 ಕಿಲೋವ್ಯಾಟ್‌ಗಳಿಗೆ 60 ಸಾವಿರ ರೂ. ಮತ್ತು 3 ಕಿಲೋವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಸಿಸ್ಟಮ್‌ಗಳಿಗೆ 78 ಸಾವಿರ ರೂ.ವರೆಗೆ ರಿಯಾಯಿತಿಗಳು ಸಿಗಲಿವೆ. ನಿಯಮಗಳನ್ನು ಬದಲಾಯಿಸಿರುವುದರಿಂದ ಕೇಂದ್ರ ಸರ್ಕಾರ ಸಬ್ಸಿಡಿಯನ್ನು ಸಹ ನಿಲ್ಲಿಸಲಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಇದರಲ್ಲಿ ಯಾವುದೇ ಸತ್ಯವಿಲ್ಲ. ಕೇಂದ್ರ ಸರ್ಕಾರ ಮೊದಲಿನಂತೆಯೇ ಸೋಲಾರ್ ಅಳವಡಿಸಿಕೊಳ್ಳುವವರಿಗೆ ಸಬ್ಸಿಡಿ ನೀಡಲಿದೆ. ಕೇಂದ್ರದ ಜೊತೆಗೆ ಹಲವು ರಾಜ್ಯ ಸರ್ಕಾರಗಳು ಕೂಡ ‘ಟಾಪ್ ಅಪ್’ ಹೆಸರಿನಲ್ಲಿ ಸಬ್ಸಿಡಿಗಳನ್ನು ನೀಡುತ್ತಿವೆ. ನಿಯಮಗಳು ಬದಲಾದರೂ ಇವು ಮುಂದುವರಿಯಲಿವೆ.

