ಡಿಜಿಟಲ್ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಯುಐಡಿಎಐ (UIDAI) ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಎಂ-ಆಧಾರ್ ಆ್ಯಪ್ ಸೇವೆಗಳು ಸ್ಥಗಿತಗೊಳ್ಳಲಿದ್ದು, ಅದರ ಬದಲಾಗಿ ಹೆಚ್ಚಿನ ಭದ್ರತಾ ಫೀಚರ್ಗಳನ್ನು ಹೊಂದಿರುವ ಹೊಸ ‘ಆಧಾರ್ ಆ್ಯಪ್’ ಅನ್ನು ಕಡ್ಡಾಯವಾಗಿ ಬಳಸುವಂತೆ ಬಳಕೆದಾರರಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಬಳಕೆದಾರರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಹಳೆಯ ಆ್ಯಪ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಹೊಸ ಆ್ಯಪ್ನಲ್ಲಿ ಅನೇಕ ಫೀಚರ್ಗಳನ್ನು ಸೇರಿಸಲಾಗಿದ್ದು, ಕ್ಯೂಆರ್ ಕೋಡ್ (QR Code) ಪರಿಶೀಲನಾ ಸೌಲಭ್ಯವೂ ಇದೆ.
ಯುಐಡಿಎಐ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಸ್ಮಾರ್ಟ್ಫೋನ್ನಲ್ಲಿ ಆಧಾರ್ ಸೇವೆಗಳನ್ನು ಪಡೆಯುವ ವಿಧಾನದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ. ಪ್ರಸ್ತುತ ಬಳಕೆಯಲ್ಲಿರುವ ಎಂ-ಆಧಾರ್ ಆ್ಯಪ್ ಅನ್ನು ಶೀಘ್ರವೇ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಇದರ ಬದಲಾಗಿ ಹೊಸ ಆಧಾರ್ ಆ್ಯಪ್ ಅನ್ನು ಬಳಸುವಂತೆ ಸೂಚಿಸಿದೆ. ಬಳಕೆದಾರರಿಗೆ ಕಠಿಣ ಭದ್ರತೆ, ವೈಯಕ್ತಿಕ ಡೇಟಾದ ಮೇಲೆ ನಿಯಂತ್ರಣ ಮತ್ತು ಆಧುನಿಕ ಡಿಜಿಟಲ್ ದೃಢೀಕರಣ ವ್ಯವಸ್ಥೆಯನ್ನು ಒದಗಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಯುಐಡಿಎಐ ಸ್ಪಷ್ಟಪಡಿಸಿದೆ. ಬಳಕೆದಾರರೆಲ್ಲರೂ ಹೊಸ ಆ್ಯಪ್ಗೆ ಬದಲಾಗಬೇಕೆಂದು ಕೋರಿದೆ. ಈ ಕುರಿತು ಯುಐಡಿಎಐ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿದೆ.
ಆಧಾರ್ ಹೊಸ ಆ್ಯಪ್ನ ಫೀಚರ್ಗಳು: ಕೇಂದ್ರ ಸರ್ಕಾರವು ಈ ವರ್ಷದ ಜನವರಿಯಲ್ಲಿ ಹೊಸ ಆಧಾರ್ ಆ್ಯಪ್ ಅನ್ನು ಪ್ರಾರಂಭಿಸಿತ್ತು. ತದನಂತರ ಸಂಪೂರ್ಣ ಆವೃತ್ತಿಗಳನ್ನು ಅಪ್ಗ್ರೇಡ್ ಮಾಡಿದೆ. ಇದು ಎಂ-ಆಧಾರ್ ಆ್ಯಪ್ಗೆ ಪರ್ಯಾಯವಾಗಿರುವುದಲ್ಲದೆ, ದೈನಂದಿನ ಜೀವನದಲ್ಲಿ ಆಧಾರ್ ದೃಢೀಕರಣ ಮತ್ತು ಗುರುತನ್ನು ಹಂಚಿಕೊಳ್ಳುವ ವಿಧಾನವನ್ನೇ ಬದಲಾಯಿಸುತ್ತದೆ. ಆ್ಯಪ್ನ ಹಳೆಯ ಆವೃತ್ತಿಯು ಪರಿಶೀಲನೆಯ ಸಮಯದಲ್ಲಿ ಸಂಪೂರ್ಣ ಆಧಾರ್ ವಿವರಗಳನ್ನು ತೋರಿಸುತ್ತಿತ್ತು. ಇದರಿಂದ ಆಧಾರ್ ದುರುಪಯೋಗವಾಗುವ ಸಾಧ್ಯತೆ ಇತ್ತು. ಆದರೆ ಹೊಸ ಆ್ಯಪ್ನಲ್ಲಿ ಕ್ಯೂಆರ್ ಶೇರಿಂಗ್ ಮತ್ತು ಫೇಸ್ ಅಥೆಂಟಿಕೇಶನ್ (Face Authentication) ಮುಂತಾದ ಫೀಚರ್ಗಳಿವೆ. ಕ್ಯೂಆರ್ ಆಧಾರಿತ ಆಧಾರ್ ಹಂಚಿಕೆಯು ಪ್ರಮುಖ ಬದಲಾವಣೆಗಳಲ್ಲಿ ಒಂದಾಗಿದೆ. ಹೊಸ ಆ್ಯಪ್ನಲ್ಲಿ ಕ್ಯೂಆರ್ ಕೋಡ್ ಪರಿಶೀಲನೆಯ ಮೂಲಕ ಅಗತ್ಯವಿರುವ ಆಧಾರ್ ಮಾಹಿತಿಯನ್ನು ಮಾತ್ರ ಬಳಕೆದಾರರು ಹಂಚಿಕೊಳ್ಳಬಹುದು.
ಕ್ಯೂಆರ್ ಕೋಡ್ ಮೂಲಕ.. ಸಂಪೂರ್ಣ ಆಧಾರ್ ವಿವರಗಳನ್ನು ಬಹಿರಂಗಪಡಿಸದೆ, ಕೇವಲ ಅಗತ್ಯವಿರುವ ವಿವರಗಳನ್ನು ಮಾತ್ರ ಕ್ಯೂಆರ್ ಕೋಡ್ ವಿಧಾನದ ಮೂಲಕ ಹಂಚಿಕೊಳ್ಳಬಹುದು. ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ಹೋಟೆಲ್ಗಳು ಮತ್ತು ಇತರ ಕಡೆಗಳಲ್ಲಿ ಆಧಾರ್ ಅಗತ್ಯವಿರುವಾಗ ಈ ಫೀಚರ್ ಅನ್ನು ಬಳಸಿಕೊಳ್ಳಬಹುದು. ಈವರೆಗೆ ಆಧಾರ್ ಪ್ರವೇಶವು ಓಟಿಪಿ (OTP) ದೃಢೀಕರಣದ ಮೂಲಕ ನಡೆಯುತ್ತಿತ್ತು. ಆದರೆ ಹೊಸ ಆ್ಯಪ್ನಲ್ಲಿ ಓಟಿಪಿ ಜೊತೆಗೆ ಫೇಸ್ ರೆಕಗ್ನಿಷನ್ ಮತ್ತು ಕ್ಯೂಆರ್ ದೃಢೀಕರಣದ ಮೂಲಕವೂ ಪ್ರವೇಶ ಪಡೆಯಬಹುದು. ದುರುಪಯೋಗವನ್ನು ತಡೆಯಲು ಮತ್ತು ಡಿಜಿಟಲ್ ಪ್ರವೇಶವನ್ನು ಸುಧಾರಿಸಲು ಈ ಹೊಸ ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದೆ. ಈ ಆ್ಯಪ್ ಮೂಲಕ ಬಯೋಮೆಟ್ರಿಕ್ ಲಾಕ್ ಮಾಡಿಕೊಳ್ಳುವುದರ ಜೊತೆಗೆ ಮೊಬೈಲ್ ನಂಬರ್ ಮತ್ತು ವಿಳಾಸದಂತಹ ವಿವರಗಳನ್ನು ಸುಲಭವಾಗಿ ಅಪ್ಡೇಟ್ ಮಾಡಬಹುದು.

