2026ರ ಜುಲೈ ತಿಂಗಳು ಅಂತ್ಯಗೊಳ್ಳುತ್ತಿದ್ದು, ಇಂದಿನಿಂದ ಆಗಸ್ಟ್ ತಿಂಗಳು ಆರಂಭವಾಗಲಿದೆ. ಸಾಮಾನ್ಯವಾಗಿ ಹೊಸ ತಿಂಗಳ ಆರಂಭದೊಂದಿಗೆ ಹಲವು ಆರ್ಥಿಕ ಹಾಗೂ ಆಡಳಿತಾತ್ಮಕ ಬದಲಾವಣೆಗಳು ಜಾರಿಗೆ ಬರುತ್ತವೆ. ಈ ಬಾರಿ ಆಗಸ್ಟ್ 1ರಿಂದ ಜಾರಿಗೆ ಬರುವ ಕೆಲವು ಹೊಸ ನಿಯಮಗಳು ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬಗಳ ಬಜೆಟ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರ, ರೈಲ್ವೆ ತತ್ಕಾಲ್ ಟಿಕೆಟ್ ಬುಕ್ಕಿಂಗ್, ಕ್ರೆಡಿಟ್ ಕಾರ್ಡ್ ಶುಲ್ಕ, ಸಿಕೆವೈಸಿ (CKYC) 2.0 ಹಾಗೂ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳು ಜಾರಿಯಾಗಲಿವೆ.
LPG ಸಿಲಿಂಡರ್ ದರದಲ್ಲಿ ಬದಲಾವಣೆ ಸಾಧ್ಯ
ಪ್ರತಿ ತಿಂಗಳ ಮೊದಲ ದಿನ ತೈಲ ಮಾರುಕಟ್ಟೆ ಕಂಪನಿಗಳು ಗೃಹಬಳಕೆ ಮತ್ತು ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರಗಳನ್ನು ಪರಿಶೀಲಿಸಿ ಪರಿಷ್ಕರಿಸುತ್ತವೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಗಳಲ್ಲಿ ಏರಿಳಿತ ಹಾಗೂ ಭೌಗೋಳಿಕ-ರಾಜಕೀಯ ಉದ್ವಿಗ್ನತೆಯ ಪರಿಣಾಮವಾಗಿ ಈ ಬಾರಿ ದೇಶೀಯ ಎಲ್ಪಿಜಿ ದರಗಳಲ್ಲೂ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಗ್ಯಾಸ್ ಸಿಲಿಂಡರ್ ದರ ಏರಿಕೆಯಾಗಿದೆ. ಇರಾನ್–ಅಮೆರಿಕ ನಡುವಿನ ಉದ್ವಿಗ್ನತೆ ಮುಂದುವರಿದರೆ ಮತ್ತಷ್ಟು ಬೆಲೆ ಏರಿಕೆ ಸಾಧ್ಯವೆಂದು ಅಂದಾಜಿಸಲಾಗಿದೆ.
ರೈಲ್ವೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ಗೆ ಹೊಸ ನಿಯಮ
ಆಗಸ್ಟ್ 1, 2026ರಿಂದ ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಜಾರಿಗೆ ತರಲಿದೆ. ರಿಸರ್ವೇಶನ್ ಕೌಂಟರ್ಗಳಲ್ಲಿ ಟೋಕನ್ ವಿತರಿಸುವ ಸಮಯವನ್ನು ತತ್ಕಾಲ್ ಬುಕ್ಕಿಂಗ್ ಆರಂಭದ ಸಮಯಕ್ಕೆ ಹೊಂದಿಸಲಾಗುತ್ತದೆ. ಇದರಿಂದ ಪ್ರಯಾಣಿಕರು ಟೋಕನ್ ಪಡೆಯಲು ಮತ್ತು ನಂತರ ಟಿಕೆಟ್ ಬುಕ್ ಮಾಡಲು ಪ್ರತ್ಯೇಕ ಸರತಿಯಲ್ಲಿ ನಿಲ್ಲುವ ತೊಂದರೆ ತಪ್ಪಲಿದ್ದು, ಸಮಯ ಉಳಿತಾಯವಾಗಲಿದೆ. ಜೊತೆಗೆ ಕೌಂಟರ್ ವ್ಯವಸ್ಥೆಯೂ ಹೆಚ್ಚು ಸುಗಮವಾಗಲಿದೆ.
ಕ್ರೆಡಿಟ್ ಕಾರ್ಡ್ ಶುಲ್ಕ ಹಾಗೂ ರಿವಾರ್ಡ್ಗಳಲ್ಲಿ ಬದಲಾವಣೆ
ಆಗಸ್ಟ್ 1ರಿಂದ ಹಲವು ಬ್ಯಾಂಕ್ಗಳು ತಮ್ಮ ಸೇವಾ ಶುಲ್ಕ, ಕ್ರೆಡಿಟ್ ಕಾರ್ಡ್ ನಿಯಮಾವಳಿ ಹಾಗೂ ಎಸ್ಎಂಎಸ್/ಅಲರ್ಟ್ ಶುಲ್ಕಗಳಲ್ಲಿ ಬದಲಾವಣೆ ತರಲು ಸಿದ್ಧವಾಗಿವೆ. ಇದರಿಂದ ಕೆಲವು ಸೇವೆಗಳ ಮೇಲಿನ ಶುಲ್ಕ ಹೆಚ್ಚಾಗುವ ಸಾಧ್ಯತೆ ಇದೆ.
CKYC 2.0 ಜಾರಿ
ಬ್ಯಾಂಕ್ಗಳು, ವಿಮಾ ಕಂಪನಿಗಳು ಹಾಗೂ ಮ್ಯೂಚುವಲ್ ಫಂಡ್ ಸಂಸ್ಥೆಗಳಲ್ಲಿ ಗ್ರಾಹಕರ ಗುರುತು ಪರಿಶೀಲನೆಗಾಗಿ ಆಗಸ್ಟ್ 1ರಿಂದ ಸೆಂಟ್ರಲ್ KYC (CKYC) 2.0 ವ್ಯವಸ್ಥೆ ಜಾರಿಗೆ ಬರಲಿದೆ. ಇದರ ಮೂಲಕ ಒಮ್ಮೆ KYC ಪೂರ್ಣಗೊಳಿಸಿದ ಬಳಿಕ ಹೊಸ ಬ್ಯಾಂಕ್ ಖಾತೆ ತೆರೆಯುವಾಗ ಅಥವಾ ಹೊಸ ಮ್ಯೂಚುವಲ್ ಫಂಡ್ ಖರೀದಿಸುವಾಗ ಮತ್ತೆ ಮತ್ತೆ KYC ದಾಖಲೆಗಳನ್ನು ಸಲ್ಲಿಸುವ ಅಗತ್ಯ ಇರುವುದಿಲ್ಲ. ಗ್ರಾಹಕರ ಮಾಹಿತಿ ಸುರಕ್ಷಿತವಾಗಿ ಒಂದೇ ವ್ಯವಸ್ಥೆಯಲ್ಲಿ ಲಭ್ಯವಾಗಲಿದೆ.
ITR ಸಲ್ಲಿಕೆಗೆ ತಡವಾದರೆ ದಂಡ
ವೇತನಭತ್ಯೆ ಪಡೆಯುವವರು ಹಾಗೂ ಆಡಿಟ್ ಅಗತ್ಯವಿಲ್ಲದ ತೆರಿಗೆದಾರರಿಗೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಆಗಸ್ಟ್ 1ರಿಂದ ITR ಸಲ್ಲಿಸುವವರು ಆದಾಯ ತೆರಿಗೆ ಕಾಯ್ದೆಯ ಪ್ರಕಾರ ವಿಳಂಬ ಶುಲ್ಕ, ಬಡ್ಡಿ ಹಾಗೂ ಇತರೆ ದಂಡಗಳನ್ನು ಪಾವತಿಸಬೇಕಾಗುತ್ತದೆ.

