ಬೆಂಗಳೂರು: ಆಟೋ ನಿಲ್ಲಿಸುವ ವಿಚಾರವಾಗಿ ಯುವಕರ ನಡುವೆ ಗಲಾಟೆ ಆರಂಭವಾಗಿ ಸ್ನೇಹಿತನನ್ನೇ ಕೊಲೆಗೈರುವ ಘಟನೆ ಬೆಂಗಳೂರಿನ ನಾಯಂಡಹಳ್ಳಿಯ ಅಂಬೇಡ್ಕರ ಕಾಲೋನಿಯಲ್ಲಿ ನಡೆದಿದೆ.
28 ವರ್ಷದ ಗುಣ ಕೊಲೆಯಾದ ಯುವಕ. ಗುಣನ ಸ್ನೇಹಿತನೇ ಆಗಿರುವ ವಿನೋದ್ ಕೊಲೆ ಆರೋಪಿ. ಗಲಾಟೆಯಲ್ಲಿ ವೇಲು ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.
ಮೂವರೂ ಒಂದೇ ಕಾಲೋನಿಯಲ್ಲಿ ವಾಸವಾಗಿದ್ದರು. ಎರಡು ದಿನಗಳ ಹಿಂದೆ ಮನೆ ಬಳಿ ಆಟೋ ನಿಲ್ಲಿಸುವ ವಿಚಾರವಾಗಿ ಮೂವರ ನಡುವೆ ಜಗಳವಾಗಿತ್ತು. ಇದೇ ವೇಳೆ ಬೈಕ್ ನಲ್ಲಿ ಬರುತ್ತಿದ್ದ ಗುಣ ಹಾಗೂ ವೇಲುನನ್ನು ವಿನೋದ್ ಅಡ್ಡಗಟ್ಟಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ಹೋಗಿದೆ.
ಕೋಪದಲ್ಲಿ ವಿನೋದ್ ಗುಣ ಹಾಗೂ ವೇಲುಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಗುಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಾಯಾಳು ವೇಲು ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೂವರೂ ಕೂಡ ಕೊಲೆ ಪ್ರಕರಣವೊಂದರಲ್ಲಿ ಆರೋಪಿಗಳಾಗಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.
ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

