ಇತ್ತೀಚಿನ ದಿನಗಳಲ್ಲಿ ಫ್ರಿಜ್ ಸ್ಪೋಟಗೊಳ್ಳುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ಫ್ರಿಜ್ ಅತಿಯಾಗಿ ಬಿಸಿಯಾಗುವುದು ಮತ್ತು ಗಾಳಿಯ ಸಂಚಾರಕ್ಕೆ ಅವಕಾಶ ಇಲ್ಲದಿರುವುದು. ಫ್ರಿಜ್ ಸುರಕ್ಷಿತವಾಗಿರಲು ಮತ್ತು ದೀರ್ಘಕಾಲ ಬಾಳಿಕೆ ಬರಲು ಈ ಟಿಪ್ಸ್ ಅನುಸರಿಸಿ:
ಗೋಡೆ ಮತ್ತು ಫ್ರಿಜ್ ನಡುವೆ ಅಂತರವಿರಲಿ ಫ್ರಿಜ್ ಅನ್ನು ಎಂದಿಗೂ ಗೋಡೆಗೆ ತೀರಾ ಹತ್ತಿರವಾಗಿ ಇಡಬೇಡಿ. ಗೋಡೆ ಮತ್ತು ಫ್ರಿಜ್ ನಡುವೆ ಕನಿಷ್ಠ 6 ಇಂಚುಗಳಷ್ಟು ಜಾಗ ಇರಬೇಕು. ಇದರಿಂದ ಫ್ರಿಜ್ ಹಿಂಭಾಗದಲ್ಲಿರುವ ಕಂಪ್ರೆಸರ್ ಸುತ್ತ ಗಾಳಿಯ ಸಂಚಾರ ಸುಗಮವಾಗಿ ನಡೆದು, ಅದು ಬಿಸಿಯಾಗದಂತೆ ತಡೆಯುತ್ತದೆ.
ಫ್ರಿಜ್ ಒಳಗೆ ಅತಿಯಾದ ಸಾಮಾನು ಬೇಡ ಫ್ರಿಜ್ ಒಳಗೆ ಸಾಮಾನುಗಳನ್ನು ಅತಿಯಾಗಿ ತುಂಬಿಸಬೇಡಿ. ತಂಪಾದ ಗಾಳಿ ಸುತ್ತಲು ಒಳಗಡೆ ಸ್ವಲ್ಪ ಖಾಲಿ ಜಾಗ ಇರಬೇಕು. ತುಂಬಾ ಸಾಮಾನುಗಳನ್ನು ತುರುಕುವುದರಿಂದ ಕೂಲಿಂಗ್ ಕಡಿಮೆಯಾಗುತ್ತದೆ ಮತ್ತು ಆಹಾರ ಪದಾರ್ಥಗಳು ಬೇಗನೆ ಹಾಳಾಗುವ ಸಂಭವ ಇರುತ್ತದೆ.
ಸಿಡಿಲು-ಮಿಂಚಿನ ಸಂದರ್ಭದಲ್ಲಿ ಎಚ್ಚರ ಮಳೆ ಅಥವಾ ಗುಡುಗು ಸಹಿತ ಗಾಳಿ ಬೀಸುವಾಗ ವಿದ್ಯುತ್ ಏರಿಳಿತ ಉಂಟಾಗುವುದು ಸಹಜ. ಇಂತಹ ಸಮಯದಲ್ಲಿ ಫ್ರಿಜ್‌ನ ಸರ್ಕ್ಯೂಟ್ ಬೋರ್ಡ್ ಸುಟ್ಟು ಹೋಗುವ ಅಪಾಯವಿರುತ್ತದೆ. ಆದ್ದರಿಂದ ಮಳೆ ಬಂದಾಗ ಫ್ರಿಜ್ ಸ್ವಿಚ್ ಆಫ್ ಮಾಡಿ ಪ್ಲಗ್ ಅನ್ನು ಸಾಕೆಟ್‌ನಿಂದ ಹೊರತೆಗೆಯುವುದು ಸುರಕ್ಷಿತ.
ಐಸ್ ತೆಗೆಯಲು ಚೂಪಾದ ವಸ್ತು ಬಳಸಬೇಡಿ ಫ್ರೀಜರ್‌ನಲ್ಲಿ ಗಟ್ಟಿಯಾಗಿ ಐಸ್ ಕಟ್ಟಿಕೊಂಡಿದ್ದರೆ ಅದನ್ನು ತೆಗೆಯಲು ಚಾಕು ಅಥವಾ ಸ್ಕ್ರೂ ಡ್ರೈವರ್‌ಗಳಂತಹ ಚೂಪಾದ ವಸ್ತುಗಳನ್ನು ಬಳಸಬೇಡಿ. ಇದರಿಂದ ಅನಿಲದ ಪೈಪ್‌ಗಳಿಗೆ ಹಾನಿಯಾಗಿ ಗ್ಯಾಸ್ ಲೀಕ್ ಆಗುವ ಅಪಾಯವಿರುತ್ತದೆ. ಬದಲಾಗಿ ‘ಡಿಫ್ರಾಸ್ಟ್’ ಬಟನ್ ಒತ್ತಿ ಐಸ್ ತಾನಾಗಿಯೇ ಕರಗುವಂತೆ ಬಿಡಿ.
ಹುಳಿ ಪದಾರ್ಥಗಳು ಮತ್ತು ಉಪ್ಪಿನಕಾಯಿಗಳನ್ನು ಫ್ರಿಜ್‌ನಲ್ಲಿ ಇಡುವ ಅಗತ್ಯವಿರುವುದಿಲ್ಲ. ಇವುಗಳನ್ನು ಹೊರಗಿಡುವುದರಿಂದ ಫ್ರಿಜ್‌ನಲ್ಲಿ ಜಾಗ ಉಳಿತಾಯವಾಗುವುದಲ್ಲದೆ, ದುರ್ವಾಸನೆಯೂ ತಡೆಯಬಹುದು. ಈ ಸರಳ ಕ್ರಮಗಳಿಂದ ನಿಮ್ಮ ಫ್ರಿಜ್ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದು.

